ಸಂಗೀತ ನೃತ್ಯಗಳ ಗ್ರಂಥ ಕ್ಷೇತ್ರಕ್ಕೆ ಜೈನರ ಕೊಡುಗೆಗಳು
Authored by ಡಾ.ಮನೋರಮಾ ಬಿ.ಎನ್. Published by ನೂಪುರ ಭ್ರಮರಿ. ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ[1]
ಸನಾತನ ಧರ್ಮದ ಕವಲೆಂಬಂತೆಯೇ ಕಾಣಿಸಿಕೊಳ್ಳುವಂಥ ಜೈನಸಂಪ್ರದಾಯಗಳಲ್ಲಿ ಭಾರತದ ಅಸ್ಮಿತೆಯನ್ನು ಪ್ರಧಾನವಾಗಿ ಗುರುತಿಸಬಹುದು. ಭರತನ ನಾಟ್ಯಶಾಸ್ತ್ರಕ್ಕೆ ಋಣಿಯಾದ ಬರೆವಣಿಗೆಗಳನ್ನು ಗಮನಿಸಬಹುದು. ಪ್ರಾಚೀನದಲ್ಲಷ್ಟೇ ಅಲ್ಲ, ವರ್ತಮಾನದ ಭಾರತದಲ್ಲೂ ಜೈನ ಸಮುದಾಯವು ಕಲೆ-ವಿದ್ಯೆ-ವಿಚಾರ-ಕಾವ್ಯ-ಸಂಸ್ಕೃತಿ-ಸಮಾಜಕ್ಕೆ ನೀಡಿರುತ್ತಿರುವ ಕೊಡುಗೆ ಅಪಾರವಾದುದು.
ಸುಧಾಕಲಶ
ಸಂಗೀತ ಕ್ಷೇತ್ರದ ತತ್ವಾರ್ಥ ಸಂಗ್ರಹದ ಸಾರದ ಶ್ರೇಷ್ಠ ಕೃತಿ ಎಂಬ ಅರ್ಥವನ್ನು ಹೊರಸೂಸುವ ಸಂಗೀತೋಪನಿಷತ್ ಸಾರೋದ್ಧಾರ[2] ಗ್ರಂಥದ ಕರ್ತೃ ಜೈನಮುನಿ ವಾಚನಾಚಾರ್ಯ ಸುಧಾಕಲಶ. ಈತನು ಶ್ವೇತಾಂಬರ ಜೈನ ಸಮುದಾಯದ ಮಾಲಧಾರೀಯ ಗಚ್ಛಕ್ಕೆ ಸೇರಿದ್ದ ಮುನಿ. ಶ್ರೀತಿಲಕ ಮತ್ತು ಶ್ರೀ ರಾಜಶೇಖರ ಸೂರಿ ಎಂಬ ಮುನಿಗಳ ಶಿಷ್ಯ. ಈತನ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥವು ರಚನೆಗೊಂಡ ಕಾಲಮಾನ ಸಾಮಾನ್ಯಶಕ ಸುಮಾರು ೧೩೨೪ರಿಂದ ೧೩೫೦ನೇ ಇಸವಿ. ಸುಧಾಕಲಶನು ಇದಕ್ಕಿಂತ ಮೊದಲೇ ಮತ್ತಷ್ಟು ಬೃಹತ್ ಪ್ರಮಾಣದಲ್ಲಿ ಸಂಗೀತ ಗ್ರಂಥವೊಂದನ್ನು ರಚಿಸಿದ್ದನೆಂದೂ ತಿಳಿದುಬರುತ್ತದೆ. ಜೊತೆಗೆ ಏಕಾಕ್ಷರ ನಾಮಮಾಲಾ ಎಂಬ ೫೦ ಪದ್ಯಗಳ ಪುಸ್ತಿಕೆಯೂ ಈತನ ಹೆಸರಲ್ಲಿ ಕಂಡುಬರುತ್ತದೆ. ಜಿನರತ್ನಕೋಶವೆಂಬ ಸಮುಚ್ಛಯದಲ್ಲಿ ಈ ಗ್ರಂಥದ ಉಲ್ಲೇಖಗಳನ್ನು ಗುರುತಿಸಲಾಗಿದೆ. ಸುಧಾಕಲಶನ ಗುರುಗಳೆನಿಸಿದ ಅನೇಕ ಹಿರಿಯ ಮುನಿಗಳೂ ಸಂಗೀತಶಾಸ್ತ್ರದಲ್ಲಿ ಅಪಾರ ಪ್ರತಿಭಾಸಂಪನ್ನರಾಗಿದ್ದರೆಂಬುದು ತಿಳಿದುಬರುತ್ತದೆ.[3]
ಪಾರ್ಶ್ವದೇವ
ಮಹಾರಾಷ್ಟ್ರ ದಕ್ಷಿಣದಲ್ಲಿ ಪಾರ್ಶ್ವದೇವನ ಕೊಡುಗೆಯೂ ಬಹಳ ಮೌಲಿಕವಾಗಿದೆ. ಪಾರ್ಶ್ವದೇವನು ೧೨-೧೩ನೇ ಶತಮಾನದ ಅವಧಿಯಲ್ಲಿದ್ದ ಓರ್ವ ಸಂಗೀತ ಶಾಸ್ತ್ರಕಾರ ಜೈನಮುನಿ. ಆದಿದೇವ ಮತ್ತು ಗೌರಿ ಎನ್ನುವ ಬ್ರಾಹ್ಮಣ ದಂಪತಿಗಳ ಮಗ. ವಯಸ್ಕನಾಗುತ್ತಾ ಜೈನ ಮತದತ್ತ ಆಕರ್ಷಿತನಾಗಿ ಅಭಯಚಂದ್ರ ಮುನಿಯ ಶಿಷ್ಯರಾಗಿದ್ದ ಶ್ರೀ ಮಹಾದೇವ ಆರ್ಯರಲ್ಲಿ ಶಿಷ್ಯತ್ವ ಸ್ವೀಕರಿಸಿದ. ಜೈನ ದಿಗಂಬರ ಮುನಿಯಾದ. ಈತ ಬರೆದ ಗ್ರಂಥ ಸಂಗೀತ ಸಮಯಸಾರ.[4] ಇದು ರಚಿತಗೊಂಡ ಕಾಲ ಅಂದಾಜು ೧೧೬೫ರಿಂದ ೧೩೩೦ನೇ ಇಸವಿಯ ಮಧ್ಯಭಾಗ.[5] ಪಾರ್ಶ್ವದೇವನು ಗೌರವದಿಂದ ದಿಗಂಬರ ಸೂರಿ ಎಂಬ ಜೈನವಿದ್ವಾಂಸನನ್ನೂ ತನ್ನ ಗ್ರಂಥ ಸಂಗೀತಸಮಯಸಾರದ ನೃತ್ಯಾಧ್ಯಾಯದಲ್ಲಿ ನೆನೆದಿದ್ದಾನೆ. ಬಹುಷಃ ಈತನೂ ಸಂಗೀತ-ನೃತ್ಯಕ್ಷೇತ್ರದಲ್ಲಿ ಸಾಕಷ್ಟು ಪರಿಣತಿ ಪಡಿದಿದ್ದ ಪಾರ್ಶ್ವದೇವನ ಶಿಕ್ಷಕ ಇದ್ದ ಹಾಗಿದೆ.
ಮಂಡನ
೧೪೪೭-೪೮ನೇ ಇಸವಿಯಲ್ಲಿ ರಚಿತವಾದ ಜೈನ ಲಾಕ್ಷಣಿಕ ಮಂಡನನ ಸಂಗೀತಮಂಡನ, ಶೃಂಗಾರಮಂಡನ ಎಂಬ ಗ್ರಂಥಗಳೂ ಗೀತ-ವಾದ್ಯ-ತಾಲ-ನೃತ್ಯಪ್ರಬಂಧಗಳನ್ನು ಮತ್ತು ನೃತ್ತಾದಿ ಅಂಗೋಪಾಂಗ ಅಭಿನಯಗಳನ್ನು ತಿಳಿಸುವ ಮುಖ್ಯ ಆಕರಗ್ರಂಥಗಳಲ್ಲೊಂದು. ಮಾಳವರಾಜ್ಯದಲ್ಲಿ ಮಂತ್ರಿಯೂ ಆಗಿದ್ದ ಮಂಡನನು ತನ್ನ ಸಂಗೀತಮಂಡನ ಗ್ರಂಥದ ನೃತ್ಯಪರಿಚ್ಛೇದ ಎಂಬ ಅಧ್ಯಾಯದಲ್ಲಿ ಸ್ಥಾನಕ, ಚಾರಿ, ಭ್ರಮರಿ, ನೃತ್ಯಾಭ್ಯಾಸ ಪ್ರಕರಣ, ಪಾತ್ರ ಲಕ್ಷಣ, ಗೋಲಕ ಕ್ರೀಡಾ, ಚರ್ಚರೀ ಪ್ರಬಂಧ ಇತ್ಯಾದಿಗಳನ್ನೂ ತಿಳಿಸಿದ್ದಾನೆ. ಆದರೆ ಮಂಡನನ ಈ ಗ್ರಂಥಗಳು ಹೊರ ಜಗತ್ತಿಗೆ ಇಂದಿಗೂ ಅಪರಿಚಿತ. ಇರುವ ಹಸ್ತಪ್ರತಿಗಳಲ್ಲಿಯೂ ಸಾರಾಂಶದ ರೂಪದಲ್ಲಷ್ಟೇ ವಿವರಗಳು ಉಳಿದುಬಂದಿವೆ. ಸಂಗೀತೋಪನಿಷತ್ ಸಾರೋದ್ಧಾರ ಕೃತಿಯು ಕೂಡ ಸಂಗೀತಮಂಡನ ಗ್ರಂಥದ ಬಗ್ಗೆ ತಿಳಿಸಿದೆ.
ಇನ್ನಿತರ ಜೈನರ ಸಾಹಿತ್ಯದಲ್ಲಿ ಸಂಗೀತ-ನೃತ್ಯ- ಯಕ್ಷಗಾನ ವಿವರಗಳು
ಆವಂತೀ ಪ್ರವೃತ್ತಿಗೆ ಒಪ್ಪುವಂತೆ ಜೈನಮುನಿಗಳಾದ ರಾಮಚಂದ್ರ ಗುಣಚಂದ್ರ ನಾಟ್ಯದರ್ಪಣವೂ ಪ್ರಬುದ್ಧ ಗ್ರಂಥ[6]. ಹೇಮಚಂದ್ರನ ಕಾವ್ಯಾನುಶಾಸನ[7] ಸಹಿತ ಅನೇಕ ಗ್ರಂಥಗಳು ಅಲಂಕಾರ-ಕಾವ್ಯಶಾಸ್ತ್ರ- ಅಭಿನಯಕ್ಕೆ ಮೌಲಿಕವೆನಿಸುವ ವಿವರಗಳನ್ನೂ ಒಳಗೊಂಡಿದೆ.
ಕನ್ನಡದ ಆದಿಕವಿಯೆಂದೇ ಕೊಂಡಾಡಲ್ಪಟ್ಟ ಪಂಪನ ಆದಿಪುರಾಣದಲ್ಲಿ[8] ಬರುವ ನೀಲಾಂಜನೆಯ ನೃತ್ಯ ಬಹುಪ್ರಸಿದ್ಧ. ಆದರೆ ಇದೊಂದೇ ಅಲ್ಲ, ಜೈನ ಲಕ್ಷಣಗ್ರಂಥಗಳಲ್ಲಿ ಇನ್ನು ಎಂಥೆಂಥ ನೃತ್ಯದ ವಿವರಗಳಿವೆ ಗೊತ್ತಾ? ಜಿನರತ್ನಕೋಶವೆಂಬ ಸಮುಚ್ಛಯದಲ್ಲಂತೂ[9] ಸಂಗೀತ ದೀಪಿಕಾ, ಸಂಗೀತ ರತ್ನಾವಲಿ, ಸಂಗೀತಸಹಪಿಂಗಳ ಎಂಬಿತ್ಯಾದಿ ಗ್ರಂಥಗಳ ಉಲ್ಲೇಖವೂ ದೊರೆಯುತ್ತದೆ.
ನಾಯಾಧಮ್ಮಕ ಮತ್ತು ರಾಯಪಸೇಣ್ಯಯ ಸುತ್ತ ಎಂಬ ಜೈನಗ್ರಂಥದಲ್ಲಿ ೭೨ ವಿಧವಾದ ಕಲೆಗಳ ವಿವರಗಳಿವೆ. ರಾಯಪಸೇಣ್ಯಯ ಸುತ್ತ ಗ್ರಂಥದಲ್ಲಿ ಗೀತ-ನೃತ್ತ-ತಾಲಗಳು, ವಿಧವಿಧವಾದ ವಾದ್ಯಗಳು, ನಟ್ಟ ಮತ್ತು ನಡ ಅಂದರೆ ನರ್ತಕ ಮತ್ತು ನಟರಿಂದ ಪ್ರಸ್ತುತಿಗೊಳ್ಳುವ ವಿಲಂಬೀಯ, ದುಯ ವಿಲಂಬೀಯ, ಅಂಚೀಯ, ರಿಭಿಯ, ಆರಭಡ, ಭಸೋಲ, ಸಂಕುಚಿಯ, ಉಪ್ಪಯನೀವಯಪವಟ್ಟ, ಪಸಾರೀಯ, ರಯಾರಯ್ಯ, ಭಾಂತಸಂಭಾಂತ ಮೊದಲಾದ ವಿಶಿಷ್ಟ ಪ್ರಾಕೃತ ಭಾಷೆಯ ಹೆಸರುಳ್ಳ ನೃತ್ಯಗಳು, ಅದಕ್ಕೆ ಬೇಕಾದ ವಿಧವಿಧವಾದ ಸ್ಥಾನಕ ಚಾರಿಗಳು, ಮಂಡಲ-ಗತಿಗಳು, ಕಥಾವಸ್ತುವಿನ ದಶರೂಪಕಗಳನ್ನೂ ಗುರುತಿಸಬಹುದು. ಸ್ಥೂಲೀಭದ್ರ ಮತ್ತು ಕೋಶ ಎಂಬ ಗ್ರಂಥಗಳಲ್ಲಿ ಮಾರ್ಗೋಚಿತವಾದ ಕರಣಗಳನ್ನು ಅಳವಡಿಸಿಕೊಂಡ ಸುಯಿ ನಾಟ್ಟ ಅಥವಾ ಸೂಚೀನೃತ್ಯವೆಂಬ ಉಲ್ಲೇಖವನ್ನೂ ಕಾಣಬಹುದು. ವಸುದೇವಹಿಂಡಿ ಎಂಬ ನಾಲ್ಕು- ಐದು ಶತಮಾನಕ್ಕೆ ಸಲ್ಲುವ ಜೈನಗ್ರಂಥವು ನೀರಿನ ಗಡಿಯಾರದಲ್ಲಿ ನೀರು ತುಂಬುವ ತನಕ ನೃತ್ಯಗಾತಿ ನರ್ತಿಸುತ್ತಾ ಅಂತ್ಯಕೆ ತುಂಬಿದ ನೀರಿನಿಂದ ನರ್ತಕಿಯನ್ನು ಮಜ್ಜನ ಮಾಡಿಸುವ ವಿಧಿಯುಳ್ಳ ನಾಳಿಕಾಗಲಕ ಎಂಬ ವಿಶಿಷ್ಟ ಸಮಯಾಧಾರಿತ ನೃತ್ಯವನ್ನೂ ಪ್ರಸ್ತಾವಿಸುತ್ತದೆ. ಒಟ್ಟಿನಲ್ಲಿ ಜೈನ ಲಾಕ್ಷಣಿಕರ ಗ್ರಂಥಗಳಲ್ಲೂ ಅನೇಕ ಗೀತ-ವಾದ್ಯ-ನೃತ್ಯ-ತಾಲ- ಪ್ರಬಂಧ ಅಧ್ಯಯನಗಳಿಗೆ ಆಕರವಾಗುವ ವಿಷಯಗಳಿವೆ.[10]
ಲಕ್ಷಣದಲ್ಲಷ್ಟೇ ಅಲ್ಲ ಪ್ರಯೋಗಪ್ರಾವಣ್ಯದಲ್ಲೂ ಅದೆಷ್ಟೋ ಜೈನ ಬಸದಿಗಳು ಸಂಗೀತ ನೃತ್ಯ-ವಾದ್ಯ-ಶಿಲ್ಪಗಳ ಆಡುಂಬೊಲವಾಗಿರುವುದನ್ನು ಕಾಣುತ್ತೇವೆ. ಪಡುವಲಪಾಯ ಅದರಲ್ಲೂ ತೆಂಕುತಿಟ್ಟಿನ ಯಕ್ಷಗಾನದಲ್ಲೂ ಆದಿಪುರಾಣ, ಶ್ರೀ ಪಾರ್ಶ್ವನಾಥ ಚರಿತೆ, ಚಕ್ರೇಶ್ವರ ವಜ್ರನಾಭ, ಅಶನೀಶ ವಿಜಯ, ಆಚಾರ್ಯ ಸಮಂತಭದ್ರ, ಕನಕಮಂಜರೀ ಕಲ್ಯಾಣ, ಶ್ರೀ ಜ್ವಾಲಾಮಾಲಿನಿ ಮಾಹಾತ್ಮ್ಯ, ಶ್ರೀ ಕೂಷ್ಮಾಂಡಿನೀ ದೇವೀ ಮಾಹಾತ್ಮ್ಯ, ಜಿನಭಕ್ತೆ ಅಗ್ನಿಲೆ, ನೇಮಿನಾಥ ಚರಿತೆ, ಜಿನದತ್ತರಾಯ ಚರಿತೆ, ಚಾವುಂಡರಾಯ ಚರಿತೆ, ಅಡಗೂರು ಚರಿತೆ, ಚಕ್ರವರ್ತಿ ಹೊಯ್ಸಳೇಶ್ವರ, ಭರತೇಶ ವೈಭವ, ಭರತೇಶ ದಿಗ್ವಿಜಯ ಮುಂತಾದ ಜೈನ ಪ್ರಸಂಗಗಳು ರಚನೆಯಾಗಿದ್ದು ಆ ಪೈಕಿ ಭರತ ಬಾಹುಬಲಿ ಕಥಾವಸ್ತುವಿನ ಪ್ರಸಂಗವು ಸಾವಿರಕ್ಕೂ ಮಿಕ್ಕಿ ಪ್ರಯೋಗ ಪ್ರದರ್ಶನಗಳನ್ನು ಕಾಣುತ್ತಲೇ ಬಂದಿದೆ.
- ↑ ಶಾಸ್ತ್ರರಂಗ ಭಾಗ 4 : ಪಶ್ಚಿಮ/ ಆವಂತೀ ಸಂಚಿಕೆ ೪೩ : ಜೈನಮುನಿ ವಾಚನಾಚಾರ್ಯ ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಮತ್ತು ಅದರ ವಿಶೇಷ ಸಂಗತಿಗಳು ಹಾಗೂ ಮಂಡನನ ಸಂಗೀತ ಮಂಡನ ಸೇರಿದಂತೆ ಭಾರತೀಯ ಗೀತ-ನೃತ್ಯ- ಯಕ್ಷಗಾನ ರಂಗಭೂಮಿಗಳಿಗೆ ಜೈನರ ಕೊಡುಗೆಗಳು https://www.noopurabhramari.com/
- ↑ Sangītopanishat Saroddhara.Author: Vacanacarya Sudhakalasa; Editor: Umakant Premanand Shah 1961. http://musicresearchlibrary.net/omeka/items/show/855
- ↑ ಜೈನಮುನಿ ವಾಚನಾಚಾರ್ಯ ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ ಗ್ರಂಥ in IKS Wiki
- ↑ Vijayalakshmi. (Ed.) (2003). Sri Parsvadeva’s Sangita Samayasara. Delhi: Shivalik Prakashan. Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries. Madras: Adyar Library.
- ↑ ಪಾರ್ಶ್ವದೇವನ ಸಂಗೀತಸಮಯಸಾರ ಗ್ರಂಥ in IKS Wiki
- ↑ https://archive.org/details/TheNatyaDarpanaOfRamachandraAndGunachandraACriticalStudyK.H.Trivedi
- ↑ https://archive.org/details/in.ernet.dli.2015.496076
- ↑ https://archive.org/details/ananthakrishna_201802
- ↑ https://archive.org/details/dli.ernet.420638
- ↑ Sangītopanishat Saroddhara.Author: Vacanacarya Sudhakalasa; Editor: Umakant Premanand Shah 1961. http://musicresearchlibrary.net/omeka/items/show/855