ಕೊಡಗಿನ ಹುತ್ತರಿ ಸುಗ್ಗಿ
Authored by ಡಾ.ಮನೋರಮಾ ಬಿ.ಎನ್. Published by ನೂಪುರಭ್ರಮರಿ, ಈ ಲೇಖನ ನೂಪುರಭ್ರಮರಿ ಐ ಕೆ ಎಸ್ ಸೆಂಟರ್ ನ ಕೊಡುಗೆ.
ಕರ್ನಾಟಕದ ಜಿಲ್ಲೆಗಳ ಪೈಕಿ ಅತ್ಯಂತ ಮನ್ನಣೆ ಪಡೆದ ಕೊಡಗಿನ ಪ್ರಮುಖ ಹಬ್ಬವೇ ಹುತ್ತರಿ. ಅಂತೆಯೇ ಇದು ಕೊಡವರ ಹಬ್ಬವೂ ಹೌದು. ಕೊಡವಮನೆತನದವರಿಗಂತೂ ಹುತ್ತರಿಯೇ ಯುಗಾದಿ. ಹುತ್ತರಿಯೇ ದೀಪಾವಳಿ. ಕೊಡವರಿಗೆ ಹುತ್ತರಿಯೇ ಹಬ್ಬಗಳ ರಾಜ. ಹುತ್ತರಿಗೆ ತಿಂಗಳೊಂದು ಇರುವಾಗಲೇ ಮನೆಗೆ ಸುಣ್ಣ-ಬಣ್ಣ ಬಳಿದು ಸುಗ್ಗಿಯನ್ನು ಹುಗ್ಗಿಯಾಗಿಸಿ ಸುಖಿಸಿ ಮನೆಗೆ ತುಂಬಿಸಿಕೊಳ್ಳುವ ಸಂಭ್ರಮದಲ್ಲಿರುತ್ತಾರೆ.
ಆಚರಣೆಯ ಕ್ರಮ
ಕೊಡವ ಭಾಷೆಯಲ್ಲಿ ‘ಪುದಿಯ ಅರಿ’ ಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ- ಪುತ್ತರಿ. ಕನ್ನಡದಲ್ಲಿ ಹುತ್ತರಿ. ಹೊಸ ಅಕ್ಕಿಯ (ಪುದಿಯ ಅರಿ) ಜೊತೆಗೆ ಬೆರೆಯುವುದೇ ಹುತ್ತರಿ. ಇಂಥ ಸುಗ್ಗಿಯನ್ನು ಹುಗ್ಗಿಯಾಗಿಸಲು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ.
ಬಂಧು-ಬಾಂಧವ ಊರವರೊಂದಿಗೆ ಹುತ್ತರಿಯ ಆಚರಣೆಯಿರುತ್ತದೆ. ಕುಟುಂಬದ ಪ್ರತಿಸದಸ್ಯನೂ ಹುತ್ತರಿ ಹಬ್ಬಕ್ಕೆ "ಐನ್ ಮನೆ"(ಕುಟುಂಬದ ಹಿರಿಮನೆ)ಗೆ ಬಂದೇ ಬರಬೇಕು; ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ ! ಎಲ್ಲರೂ ಸೇರಿದಾಗ ಹುತ್ತರಿಯ ದಿನ ಮನೆಯ ‘ನೆಲ್ಲಕ್ಕಿ’ ನಡುಬಾಡೆ (ಮನೆಯ ನಡುವಿನ ಕೋಣೆ)ಯಲ್ಲಿ ಲಕ್ಷ್ಮೀ ತೂಗುದೀಪ (ಕಾವೇರಿ ದೀಪ) ತೂಗುತ್ತದೆ. ಕೆಳಗೆ ಹಾಸಿದ ಚಾಪೆಯಲ್ಲಿ ಹುತ್ತರಿ ಕುಕ್ಕೆ. ಅದರೊಳಗೆ ಮಾವಿನೆಲೆ, ಅಶ್ಚ್ವತ್ಥ, ಅತ್ತಿ, ಆಲ, ಇಟ್ಟುಗ ಅಥವಾ ಹಲಸು, ಕುಂಬಳಿ, ಕಾಡು ಗೇರುಮರದ ಎಲೆಗಳ ಪಂಚ ಪತ್ರೆಯನ್ನು ದಡ್ಡಾಲ ಮರದ ಬಳ್ಳಿಯಲ್ಲಿ ಪುತ್ತರಿನಾರೆಂದು ಕಟ್ಟಿದ ‘ನೆರೆಕಟ್ಟು’. ಜೊತೆಗೊಂದಷ್ಟು ಹಾಲು, ಜೇನು, ತುಪ್ಪ, ಎಳ್ಳು, ಶುಂಠಿ, ತೆಂಗಿನಕಾಯಿಯ ಚೂರು, ತಂಬಿಟ್ಟು ಮುಂತಾದ ಫಲವಸ್ತುಗಳು.
ಕೊಡವನಾಡಿಗೆ ಅನ್ನ(ಇಗ್ಗು) ಕೊಡುವ (ತಪ್ಪ) ದೇವರು ಪಾಡಿಯ ಇಗ್ಗುತ್ತಪ್ಪ. ಹಾಗೆಂದೇ ಹುತ್ತರಿಯ ಮೊದಲ ದಿನ ‘ಪಾಡಿ ಪೊಳ್ದ್’- ಆತನಿಗೆ ಮೀಸಲು. ಪಾಡಿಯ ದೇವಸ್ಥಾನದ ಗದ್ದೆಯಿಂದ ಕದಿರು ತಂದು ಅನ್ನದೈವ ಸುಬ್ರಹ್ಮಣ್ಯನಿಗೆ ಸಮರ್ಪಿಸಲಾಗುತ್ತದೆ. ಎರಡನೇ ದಿನ ‘ನಾಡ್ ಪೊಳ್ದ್’- ಕೊಡವರು ಕದಿರನ್ನು ಮನೆಗೆ ತರುವ ನಾಡ ಹಬ್ಬ.ಹಬ್ಬದ ದಿನದಂದು ಭೂತಾಯಿಗೆ ನಮಿಸುತ್ತಾರೆ. ಕದಿರಿನ ಬುಡ ಲಕ್ಷ್ಮೀಸ್ಥಾನ. ಅದಕ್ಕೂ ಪ್ರಾರ್ಥನೆ ಮಾಡಿ ಹಣ್ಣುಕಾಯಿಗಳನ್ನರ್ಪಿಸಿ ಹಾಲುಜೇನು ಸುರಿದು ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಿ ‘ಪೊಲಿ ಪೊಲಿ ದೇವಾ’ ಎಂದೆಲ್ಲಾ ಪಾಡ್ದನಗಳನ್ನು ಹಾಡುತ್ತಾರೆ. ಹೀಗೆ ಮೈದುಂಬುವ ಸಂಪತ್ತಿನ ಆಶಯದ ಪಾಡ್ದನಗಳನ್ನು ಹಾಡುತ್ತಾ ಕದಿರನ್ನು ಕೊಯ್ದು ಮನೆಗೆ ಬರಮಾಡಿಕೊಳ್ಳುತ್ತಾರೆ.
ಹೊಸಕ್ಕಿಯನುಂಡು ಹೊಸತಾಗುವ ಕಾಲವದು. ಹುತ್ತರಿಯ ಊಟಕ್ಕೆ ಹೊಸ ಅಕ್ಕಿಯನ್ನು ಸ್ವಲ್ಪವಾದರೂ ಸೇರಿಸಲೇಬೇಕು ಎಂಬ ಕಟ್ಟಳೆಯಿದೆ. ಹಾಗಾಗಿಯೇ ಕುಕ್ಕೆಯ ತುಂಬಾ ಹಳೆಯ ಭತ್ತವನ್ನೂ ಅದರ ಮೇಲೆ ಸೇರಿನ ಅರ್ಧಕ್ಕೆ ಅಕ್ಕಿ ತುಂಬಿ ಹಣತೆಯೊಂದನ್ನು ಅದರ ಮೇಲಿಟ್ಟು, ಪಕ್ಕದಲ್ಲಿ ವೀಳ್ಯದೆಲೆ-ಅಡಕೆಗಳನ್ನಿಡಲಾಗುತ್ತದೆ.
ಲಾಭಕ್ಕೂ ಬೆಸಸಂಖ್ಯೆಗೂ ಎಲ್ಲಿಲ್ಲದ ಅನುಬಂಧ. ಕದಿರನ್ನು ಬೆಸಸಂಖ್ಯೆಯಲ್ಲಿ ಕೊಯ್ಯುವ ಕ್ರಮ ಅದಕ್ಕಾಗಿಯೇ. ಕೊಯ್ದ ಕದಿರನ್ನೊಯ್ಯುವವನ ಕಾಲು ತೊಳೆದು ಹಾಲು ನೀಡಿ ಆರತಿ ಬೆಳಗಿ ಧಾನ್ಯಲಕ್ಷ್ಮಿಯನ್ನು ಮನೆಯ ಮುತೈದೆ ಮನೆತುಂಬಿಸಿಕೊಳ್ಳುವುದು; ಕದಿರಿನ ಒಂದೊಂದು ಎಳೆಯನ್ನು ಕಣದ ನಡುಗಂಭಕ್ಕೆ, ಕೈಮಡದ ಬಾಗಿಲಿಗೆ, ಮನೆಯ ಎಲ್ಲಾ ಕಿಟಿಕಿ-ಬಾಗಿಲುಗಳಿಗೆ, ಬಾವಿಗೆ ಕೊಟ್ಟಿಲುಗಳಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ ಹೀಗೆ ಸಂಪತ್ತಿನ ಸೂಚಕವಾಗಿ ಒಂದೊಂದು ಅಶ್ವತ್ಥದೆಲೆಯಲ್ಲಿ ಸುತ್ತಿ ಪುತ್ತರಿನಾರಿನಿಂದ ಕಟ್ಟುವುದು ಕ್ರಮ. ಈಗೆಲ್ಲಾ ಮನೆಯ ಮುಂಬಾಗಿಲಿಗೆ ನೇಯ್ದು ತೋರಣ ಮಾಡುವ ಕಲಾತ್ಮಕತೆಯೂ ಜೊತೆಯಾಗಿದೆ.
ಆಹಾರ ವೈವಿಧ್ಯ
ಕುಟುಂಬ-ಸ್ನೇಹಿತ- ಬಂಧು-ಬಾಂಧವ ಊರವರೊಂದಿಗೆ ಒಟ್ಟಿಗೆ ಕುಳಿತು ಬೇಯಿಸಿದ ‘ಪುತ್ತರಿ ಕಳಂಜಿ’ಯನ್ನು (ಹುತ್ತರಿ ಗೆಣಸನ್ನು) ಜೇನು ಮತ್ತು ತುಪ್ಪದಲ್ಲಿ ಅದ್ದಿಕೊಂಡು ಹಂಚಿ ಫಲಹಾರ ಮಾಡುವುದೂ ಕೂಡಾ ಹಬ್ಬದ ಒಂದು ವಿಧಿ. ಕಾಡಿನ ಕತ್ತಲೆಯ ಭಯವನ್ನು ನಿವಾರಿಸಿಕೊಂಡು ಪ್ರಕೃತಿಕದತ್ತವಾದ ಔಷಧಿಯುಕ್ತ ಗೆಣಸನ್ನು ಅಗೆದು ತಂದು ತಿನ್ನುವುದೇ ಈ ಸುಗ್ಗಿ ಹುಗ್ಗಿಯ ವಿಶೇಷತೆ.
ಕದಿರು ಕಟ್ಟಿದ ಬಳಿಕ ಹೂರಣಕ್ಕೆ ಅಣಿಯಾಗುವ ಹೊತ್ತು. ಬೆಲ್ಲ ಸೇರಿಸಿದ ಅಕ್ಕಿ ಪಾಯಸ, ಅಕ್ಕಿಹಿಟ್ಟಿನ ಸಿಹಿತಿಂಡಿ ತಂಬಿಟ್ಟು.. ಹೀಗೆ ಅಡಿಗೆಯಲ್ಲಿ ಅಕ್ಕಿಯದ್ದೇ ಪಾರುಪತ್ಯ. ಗತಿಸಿದ ಹಿರಿಯರ ನೆನಪಿಗೆ ಏಲಕ್ಕಿಪುಟ್ಟ್ ಎಂಬ ವಿಶೇಷ ಖಾದ್ಯ. ತೀರಿಹೋದವರ ಹೆಸರನ್ನು ಹೇಳಿ ನಡುಬಾಡೆಯ ಮಾಡಿಗೆ ಎಸೆದು ಪಿತೃಗಳಿಗೆ ತೃಪ್ತಿ, ಶಾಂತಿಯನ್ನು ಕೋರುವುದೂ ಹಬ್ಬದ ಒಂದು ಭಾಗವೇ ಆಗಿದೆ.
ಹಬ್ಬದ ಕಡೆಯ ದಿನ ಊರವರೆಲ್ಲಾ ಗ್ರಾಮದ ಅಂಬಲ-ಮೈದಾನದಲ್ಲಿ ನೆರೆದು ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುವ ‘’ಊರೋಮರ್’. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸಲಿಕ್ಕೂ ಈ ವಿಧಿ ಮೊದಲಿಗೆ ಬಳಕೆಯಾಗುತ್ತಿದ್ದದ್ದಿದೆ.
ಹುತ್ತರಿ ಕುಣಿತ ಮತ್ತು ಕಲೆ
ಕದಿರು ತೆಗೆಯುವ ದಿನಕ್ಕೆ ಒಂದುವಾರದ ಮೊದಲಿಗೇ ಈ ಹಾಡು-ಕುಣಿತಗಳ ತಾಲೀಮು ‘ಈಡು ತೆಗೆಯುವದು’ ಶುರುವಿಟ್ಟುಕೊಳ್ಳುತ್ತದೆ. ರಾತ್ರಿ ಏಳು-ಏಳೂವರೆಗೆ ಪ್ರತೀ ಕುಟುಂಬದಿಂದ ಒಬ್ಬನಂತೆ ಭಾಗವಹಿಸಿ ಊರ ‘ತಕ್ಕ’(ಮುಖ್ಯಸ್ಥ)ನ ನೇತೃತ್ವದಲ್ಲಿ ಊರ ‘ಮಂದ್’ನಲ್ಲಿ ತರಬೇತಿ ಪಡೆಯುವುದು ಇದರ ವಿಶೇಷ. ಸುಮಾರು ನೂರು ವರ್ಷಗಳಿಗೆ ಮುಂಚೆ ಎಲ್ಲರೂ ನಾಲ್ಕು ಜನರು ದುಡಿಗಳನ್ನು ಬಾರಿಸುತ್ತಾ ಕೊಡವ ಜಾನಪದ ಹಾಡುಗಳನ್ನು ಹಾಡುತ್ತಾ ಅವರ ಮುಂದೆ ಊರಿನ ಮೇದರು ಅಥವಾ ಹರಿಜನರು ಡೊಳ್ಳು, ವಾಲಗಗಳನ್ನು ಬಾರಿಸುತ್ತಾ ನಡೆಯುತ್ತಾ ಮಂದ್ ತಲುಪುವುದು ವಾಡಿಕೆಯಾಗಿತ್ತಂತೆ. ಹೀಗೆ ಮಂದ್ ತಲುಪಿದ ನಂತರ ‘ಅರಪುವತರ’ ಹಾಕಿ ‘ನಾಡೆ’ ಕರೆಯುವುದು ಕ್ರಮ. ನಾಡೆ ಹಾಸ್ಯಮಯವಾದ ಒಂದು ಸಣ್ಣ ಪ್ರಹಸನದ ಪ್ರದರ್ಶನ. ನಗು ಹಸನಾಗಿ ಹಬ್ಬಬೇಕು ಎಂಬ ನಿಲುವಿನ ಆಚರಣೆಯದು.
ಹುತ್ತರಿಯ ದಿನ ಆವರಣದ ರಂಗದ ಮಧ್ಯದಲ್ಲಿ ದೀಪಸ್ತಂಭ. ಅದರ ಸುತ್ತಲೂ ಸಾಂಪ್ರದಾಯಕ ಉಡುಗೆ-ತೊಡುಗೆಗಳನ್ನು ಧರಿಸಿ ನೆರೆತ ಹೆಂಗಳೆಯರು ಹುತ್ತರಿ ಹಾಡು, ಪಾಡ್ದನಗೀತೆಗಳನ್ನು ಹಾಡಿದರೆ, ಪುರುಷರು ‘ಪೊಯಿಲೇ’ ಎಂದು ಹಾಡುತ್ತಾ ಶೌರ್ಯ, ಪರಾಕ್ರಮಗಳ ಪ್ರತೀಕವಾದ ನರ್ತನವಾಡುತ್ತಾರೆ. ಮಂದ್ನ ಅರಳೀಮರದ ಸುತ್ತಲೂ ದೊಡ್ಡ ವೃತ್ತಾಕಾರದಲ್ಲಿ ಕೊಡವ ಪುರುಷರೆಲ್ಲಾ ನಿಂತು ಡೊಳ್ಳಿನ ನುಡಿತಕ್ಕೆ ಸರಿಯಾಗಿ ಕಿರುಗೆಜ್ಜೆಗಳನ್ನು ಕಟ್ಟಿದ ಆಳುದ್ದನೆಯ ಬೆತ್ತದ ಕೋಲುಗಳನ್ನು ಹಿಡಿದು ಕೋಲಾಟವಾಡುತ್ತಾರೆ. ಇಬ್ಬರು ಗಂಡಸರು ಬೆತ್ತದ ಗುರಾಣಿ ಹಾಗೂ ಅರೆಯಾಳುದ್ದದ ಕೋಲನ್ನೂ ಹಿಡಿದು ಪರೆಯಕಳಿಯನ್ನಾಡುತ್ತಾರೆ. ಹೀಗೆ ಉಮ್ಮತ್ತಾಟ್, ಬೊಳಕಾಟ್, ಪರಿಯಕಳಿ, ಹುತ್ತರಿ ಕೋಲಾಟದಲ್ಲಿ ಪಾಲ್ಗೊಳ್ಳುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಈ ಎಲ್ಲಾ ನೃತ್ತಸಂಭ್ರಮದ ಅಂತಿಮಘಟ್ಟ ಸಾಮೂಹಿಕ ಕುಣಿತ.
ಹೀಗೆ ಊರ ಕೋಲು ಆದ ಬಳಿಕ ಜಾನಪದ ಮಟ್ಟಿನ ಹಾಡುಗಳನ್ನು ಆಯಾಯ ಮನೆಯ ಎದುರಿಗೆ ನಿಂತು ಸ್ತುತಿರೂಪದಲ್ಲಿ ಬೆಳಗಾಗುವವರೆಗೆ ಹಾಡುತ್ತಾರೆ. ಹೀಗೆ ಹಾಡಿ ಗಳಿಸಿದ ಹಣದಲ್ಲಿ ಮಾಡಿ ಹಬ್ಬವನ್ನು ಸಮಾಪ್ತಿ ಮಾಡುವ ರೀತಿಯೇ ‘ಊರೊರ್ಮೆ’. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸಲಿಕ್ಕೂ ಈ ವಿಧಿ ಬಳಕೆಯಾಗುತ್ತಿದ್ದದ್ದಿದೆ. ಒಟ್ಟಿನಲ್ಲಿ ಒಂದು ಸುಗ್ಗಿಯ ಹಬ್ಬಕ್ಕೆ ಊರಿನವರೆಲ್ಲಾ ಕೂಡಿ ಒಂದಾಗಿ ಬಾಳಬೇಕೆಂಬ ಸಮಷ್ಟಿಪ್ರಜ್ಞೆ ಔತಣದ ಉದ್ದೇಶ. ‘ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೇ, ಪೊಯಿಲೇ... ಪೋಪಕ ಪುತ್ತರಿ ಎಣ್ಣತೆ ಪೋಚಿ ದಮ್ಮಯ್ಯ ಪುತ್ತರಿ ಒಮ್ಮಲು ಪೋತೆ..- ’ಹುತ್ತರಿ ಬರುವಾಗ ಸಡಗರದಿಂದ ಬಂತು, ಹೋಗುವಾಗ ಯಾರಿಗೂ ಹೇಳದೆ ಹೋಯಿತು, ಬಿನ್ನಹ ಹುತ್ತರಿ- ಒಮ್ಮೆಯೂ ಹೋಗದಿರು..” ಎಂದು ಕೊಡವರು ಹೇಳುವುದು ಇದೆ.
ಬದಲಾದ ಕಾಲಘಟ್ಟದಲ್ಲಿ ಹುತ್ತರಿ ಆಚರಣೆ
ಇಂದಿಗೆ ಭತ್ತದ ಕೃಷಿ ಕಡಿಮೆಯಾಗತೊಡಗಿದೆ. ಗದ್ದೆಗಳು ವಿರಳ. ಪಟ್ಟಣದ ಜೀವನಕ್ಕೆ ಹಂಬಲಿಸುವವರು ಹೆಚ್ಚು. ಹಬ್ಬದ ಆಚರಣೆಯನ್ನು ಮಾಡಲೇ ಬೇಕೆಂದು ಸಾಂಪ್ರದಾಯವಾಗಿ ಕದಿರು ತೆಗೆಯಲು ಅನುಕೂಲವಾಗುವಂತೆ ಕೆಲವರು ಮನೆ ಬಳಿಯೇ ಚಿಕ್ಕ ಗದ್ದೆಮಾಡಿ ಅದರಲ್ಲಿ ಭತ್ತ ನೆಟ್ಟಿದ್ದರೆ, ಮತ್ತೆ ಕೆಲವರು ಮನೆಯ ಕಾಂಪೌಂಡ್ನಲ್ಲಿಯೇ ಭತ್ತದ ಸಸಿನೆಟ್ಟು ಆರೈಕೆ ಮಾಡಿ ಹಬ್ಬದ ದಿನ ಕದಿರು ತೆಗೆಯುತ್ತಾರೆ. ಮಳೆಗಾಲದಲ್ಲಿ ನಾಟಿ ಮುಗಿಸಿದ ಸಂತೋಷದಲ್ಲಿ ಕೈಲ್ ಮುಹೂರ್ತವನ್ನು ಆಚರಿಸಿದರೆ, ಬೆಳೆ ಬೆಳೆದು ತೆನೆಯೊಡೆಯುತ್ತಿದ್ದಂತೆಯೇ ತುಲಾ ಸಂಕ್ರಮಣ, ಬೆಳೆ ಕಟಾವು ಮಾಡಿ ಮನೆಗೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಹುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
( ಈ ಲೇಖನವು ವಿಜಯಕರ್ನಾಟಕ ಪತ್ರಿಕೆಯ ಬೋಧಿವೃಕ್ಷದಲ್ಲಿ 2017 ರ ಡಿಸೆಂಬರ್ 7ರಂದು ಪ್ರಕಟವಾಗಿದೆ.)[1]