ಪ್ರಾಚೀನ ದೇವಾಲಯಗಳಲ್ಲಿ ನವನಾಥರ ಕೆತ್ತನೆ
ದೇಗುಲಗಳ ಶಿಲ್ಪವು ಭಾರತೀಯ ಸಂಸ್ಕೃತಿ ಹಾಗೂ ಇತಿಹಾಸ ಪರಂಪರೆಯ ಚಿತ್ರಣ ಮಾತ್ರವಲ್ಲ, ದೈವತ್ವವನ್ನು ಜಗತ್ತಿಗೆ ತೋರಿಸುವ ಒಂದು ಅಂಶ . ಆ ಪೈಕಿ ಸಿಂಹ, ಆನೆ,ಕುದುರೆಯಂತಹ ಪ್ರಾಣಿಗಳ ತಲೆ ಹಾಗೂ ದೇಹಗಳ ಸಮಿಶ್ರಣವನ್ನು ಹೊಂದಿರುವ ವ್ಯಾಳ/ಯಾಳಿಗಳು, ದೇಗುಲದ ದ್ವಾರಗಳಲ್ಲಿ ರಕ್ಷಕ ಹಾಗೂ ಪಾಲಕರಾಗಿ ಇರುವ ಶಿಲ್ಪಗಳು, ಪೌರಾಣಿಕ ಶಿಲ್ಪಗಳು, ಆರಾಧಕರ ಶಿಲ್ಪಗಳು, ರಾಮಾಯಣ-ಮಹಾಭಾರತ-ಭಾಗವತ ಕಥೆಗಳ ಪ್ರಸಕ್ತಿಗಳನ್ನೂ ದೈವತ್ವದ ಅಂಗಭೂತವಾಗಿ ಕಾಣಬಹುದು. ಆ ಪೈಕಿ ನವನಾಥರು, ಋಷಿ- ಮುನಿಗಳು, ಕಾಪಾಲಿಕರು, ಸಿದ್ಧರು ಮೊದಲಾದವರ ಶಿಲ್ಪಗಳೂ ಸೇರಿವೆ.[1] ಶಿವನ ದೇವಾಲಯಗಳಲ್ಲಿ ನವನಾಥರ ಶಿಲ್ಪಗಳನ್ನು ಕಾಣಬಹುದಾಗಿದೆ . ಅದರಲ್ಲೂ ವಿಜಯನಗರ ಕರ್ನಾಟ ಸಾಮ್ರಾಜ್ಯ ಕಾಲದ ಬಹುತೇಕ ದೇವಸ್ಥಾನಗಳಲ್ಲಿ ನವನಾಥರ ಒಂದಾದರೂ ಕೆತ್ತನೆಯನ್ನು ಗುರುತಿಸಬಹುದು. ಆ ಪೈಕಿ ಬೆಂಗಳೂರಿನ ಹಲಸೂರಿನ ಸೋಮೇಶ್ವರ ದೇಗುಲ[2]ವನ್ನು ಮುಖ್ಯವಾಗಿ ಆಧರಿಸಿದಂತೆ ಈ ನವನಾಥರ ಕೆತ್ತನೆಗಳ ಲೇಖನವನ್ನು ಬರೆಯಲಾಗಿದೆ.
ಹಿನ್ನೆಲೆ
ನವನಾಥ ಕಥಾಸಾರಎಂಬ ಗ್ರಂಥದ ಪ್ರಕಾರ ದ್ವಾಪರಯುಗದ ಅಂತ್ಯ ,ಕಲಿಯುಗದ ಆರಂಭದ ಸಮಯದಲ್ಲಿ ಭೂಲೋಕದಲ್ಲಿ ವೈದಿಕಧರ್ಮವನ್ನು ನೆಲೆನಿಲ್ಲಿಸುವ ಹಾಗೂ ವಿಷಮ ಪರಿಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ನಾರಾಯಣನು ದ್ವಾರಕೆಯಲ್ಲಿ ಇದ್ದನು. ಆಗ ಕವಿ, ಹರಿ, ಅಂತರಿಕ್ಷ, ಪ್ರಬುದ್ಧ, ತಿಪ್ಪಲಾಯನ, ಐರಹೋತ್ರ, ಚಮನ, ದ್ರಮಿಲ ಮತ್ತು ಕರಭಾಜನರೆಂಬ ನವನಾರಾಯಣರನ್ನು ಕರೆದು ಭೂಲೋಕದ ಸ್ಥಿತಿಯನ್ನು ಬದಲಾಯಿಸುವುದಕ್ಕಾಗಿ ನವನಾಥರಾಗಿ ಜನ್ಮ ತಾಳಲು ಆಜ್ಞೆಮಾಡುತ್ತಾನೆ. ಹೀಗೆ ಭಕ್ತಿ ಹಾಗೂ ಜ್ಞಾನಮಾರ್ಗಕ್ಕೆ ಪ್ರಚೋದನೆ ನೀಡುತ್ತಾ ತಪಸ್ಸಿನ ದಾರಿ ತೋರಿಸುವ ಸಲುವಾಗಿ ಅವತರಿಸಿದವರೇ ನವನಾಥರು.
ನವನಾಥರೆಂದರೆ ಒಂಬತ್ತು ಹಾಗೂ ಹೊಸದು ಎಂಬ ಅರ್ಥವನ್ನು ಕಲ್ಪಿಸುತ್ತದೆ. ನವನಾಥರು ಶಿವ ಹಾಗೂ ಹರಿಯ ಸಂಯೋಜನೆಯ ಅವತಾರಗಳಾಗಿದ್ದು, ಇವರಲ್ಲಿ ಹರಿ-ಹರರ ಶಕ್ತಿ ಹಾಗೂ ಗುಣಗಳನ್ನು ಕಾಣಬಹುದು. ಇವರು ಸಾಮಾನ್ಯರಂತೆ ಯೋನಿಜನನವಿಲ್ಲದವರು, ಬ್ರಹ್ಮಚಾರಿಗಳು, ಲೌಕಿಕ ಜೀವನದಿಂದ ಹೊರಗುಳಿದವರು, ಹಠಯೋಗದಿಂದಲೇ ಸಿದ್ಧಿಯನ್ನು ಪಡೆದವರು, ವೈದಿಕ ಗುರು ದತ್ತಾತ್ರೇಯರ ವಂಶಾವಳಿಯವರು ಎಂಬುದಾಗಿ ನವನಾಥ ಕಥಾಸಾರದಿಂದ ತಿಳಿದು ಬಂದಿದೆ . ಇವರು ತಮ್ಮ ವಾಹನಗಳಲ್ಲಿ ಮುಖಕ್ಕೆ ಕುಳಿತ ಶಿಲ್ಪಗಳು ವಿಜಯನಗರ ಕರ್ನಾಟ ಕಾಲದ ದೇವಸ್ಥಾನಗಳಲ್ಲಿ ಗೋಪುರ, ಗೋಡೆ ಮತ್ತು ಕಂಬಗಳಲ್ಲಿ ಕಂಡುಬರುತ್ತವೆ. ಹಲವಷ್ಟು ಈಗಾಗಲೇ ಸವೆಯುತ್ತಿವೆ. ಇಂಥ ಶಿಲ್ಪಗಳ ರಕ್ಷಣೆಯ ಕಾಯಕ ನೆರವೇರಬೇಕಾದದ್ದು ಅವಶ್ಯ.
ನವನಾಥರು
1. ಮತ್ಸ್ಯೇಂದ್ರನಾಥ – ಕವಿ ನಾರಾಯಣ
2. ಗೋರಕ್ಷನಾಥ – ಹರಿ ನಾರಾಯಣ
3. ಜಾಲಂದರನಾಥ – ಅಂತರಿಕ್ಷ ನಾರಾಯಣ
4. ಕಾನಿಫನಾಥ – ಪ್ರಬುದ್ಧನಾರಾಯಣ
5. ಗಹನೀನಾಥ – ಕರಭಾಜನ ನಾರಾಯಣ
6. ನಾಗನಾಥ – ಐರಹೋತ್ರ ನಾರಾಯಣ
7. ಚರ್ಪಟಿನಾಥ – ತಿಪ್ಪಲಾಯನ ನಾರಾಯಣ
8. ಭರ್ತರಿನಾಥ – ದ್ರಮಿಲ ನಾರಾಯಣ
9. ರೇವಣನಾಥ – ಚಮಸ ನಾರಾಯಣ

1. ಮೀನನಾಥ/ ಮತ್ಸ್ಯೇಂದ್ರನಾಥ : ಈ ನಾಥರು ಮೀನಿನಿಂದ ಜನಿಸಿದನೆಂದು ಹಾಗೂ ಶಿವನಿಂದ ಹಠಯೋಗವನ್ನು ಕಲಿತು ಪೂರ್ಣ ಸಿದ್ಧಿಯನ್ನು ಸಾಧಿಸಿದರೆಂದು ನವನಾಥ ಕಥಾಸಾರದಲ್ಲಿ ತಿಳಿದುಬಂದಿದೆ. ಮೀನನಾಥರು ಮೀನಿನಮೇಲೆ ಅರ್ಧಮತ್ಸ್ಯೇಂದ್ರಾಸನದಲ್ಲಿ ಕುಳಿತಿರುವುದನ್ನು ಕಾಣಬಹುದು. ಬಲ ಅಂಗೈ ಮೀನಿನಮೇಲೆ, ಎಡಗೈ ಎಡಮಂಡಿಯಮೇಲೆ ಇರುವ ಹಾಗೆ ಇದೆ. ಹಾಗೂ ಎಡತೋಳಿನಲ್ಲಿ ತೋಳ್ಬಂದಿ ಜೊತೆ ಜೋಳಿಗೆ ಇರುವುದನ್ನು ನೋಡಬಹದು. ಪಕ್ಕದಲ್ಲಿ ತ್ರಿಶೂಲವೂ ಇರುವುದು. ಬಹುತೇಕ ವಿಜಯನಗರದ ಕಾಲದ ದೇವಸ್ಥಾನಗಳಲ್ಲಿ ಕಂಡುಬರುವ ಶಿಲ್ಪವಿದು.

2. ಗೋರಕ್ಷನಾಥ : ಇವರು ಭಸ್ಮದಿಂದ ಜನಿಸಿದರೆಂದು ಪ್ರತೀತಿ ಇದೆ. ಇವರು ಶಿವನ ಅವತಾರದ ಪ್ರತಿರೂಪವೆಂದು ನಂಬಿಕೆಯಿದೆ. ಇಲ್ಲಿ ಹುಲಿಯು ವೈರಾಗ್ಯ ಹಾಗೂ ಹಠದ ಪ್ರತೀಕ ಎಂದು ನಂಬಲಾಗಿದೆ. ಇವರು ಹುಲಿಯ ಮೇಲೆ ಅರ್ಧಮತ್ಸ್ಯೇಂದ್ರಾಸನದಲ್ಲಿ ಕುಳಿತಿರುವುದನ್ನು ಕಾಣಬಹುದು. ಅವರ ತಲೆಯೂ ಕೆಳಕ್ಕೆ ಮುಖಮಾಡಿ ಬಲಮಂಡಿಯಮೇಲೆ ವಿಶ್ರಾಂತಿಯಲ್ಲಿದೆ. ಇವರು ಕರ್ಣಕುಂಡಲ ಹಾಗೂ ಮಣಿಕಟ್ಟಿನಲ್ಲಿ ಕಡಗ ಧರಿಸಿರುವುದನ್ನು ಗುರುತಿಸಬಹುದಾಗಿದೆ.

3.ಜಾಲಂಧರನಾಥ : ಇವರು ಬೆಂಕಿಯಿಂದ ಜನಿಸಿದರೆಂದು ನವನಾಥ ಕಥಾಸಾರದಿಂದ ತಿಳಿದುಬಂದಿದೆ. ಇಲ್ಲಿ ಸಿಂಹವು ರಾಜಗಾಂಭೀರ್ಯದ ಸಂಕೇತವಾಗಿ ಹೋಲಿಸಲಾಗಿದೆ. ರಾಜಲೀಲಾಸನದಲ್ಲಿ ಸಿಂಹದ ಮೇಲೆ ಕುಳಿತಿರುವುದನ್ನು ಕಾಣಬಹುದು. ಬಲಗೈ ಬಲತೊಡೆಯ ಮೇಲೆ ಹಾಗೂ ಎಡಗೈ ಎಡಮಂಡಿಯ ಮೇಲೆ, ತಲೆಯು ಎಡತೋಳಿನ ಮೇಲೆ ವಿಶ್ರಾಂತಿಯಲ್ಲಿರುವಂತೆ ಕಾಣುವುದು.

4. ಕಾನಿಫನಾಥ : ಇವರು ಶಿವನ ಇಚ್ಛೆಯಂತೆ ಗಜದ ಕಿವಿಯಿಂದ ಜನಿಸಿದರೆಂದು ನವನಾಥ ಕಥಾಸಾರವು ಹೇಳುತ್ತದೆ. ಇಲ್ಲಿ ಗಜಯಾಳಿಯು ಶಕ್ತಿ ಹಾಗೂ ಜ್ಞಾನವನ್ನು ಬಿಂಬಿಸುತ್ತದೆ. ನಾಥನು ಗಜಯಾಳಿಯ ಮೇಲೆ ಕುಳಿತಿರುವುದನ್ನು ಕಾಣಬಹುದಾಗಿದೆ. ಯಾಳಿಯು ಬಲಗಡೆ ಮುಖಮಾಡಿ ನಾಥನ ಮುಖವು ಎಡಕ್ಕೆ ಕೆಳಮುಖ ಮಾಡಿರುವ ಹಾಗೆ ಇರುವುದು ಹಾಗೂ ನಾಥನ ಬಲ ಕೈ ಬಹುಶಃ ಅಭಯಹಸ್ತ ಹಿಡಿದಿರುವ ಹಾಗೆ, ಎಡಗೈ ಇಳಿಬಿಟ್ಟಂತೆ ಇರುವುದನ್ನು ಕಾಣಬಹುದಾಗಿದೆ.

5. ಗಹನೀನಾಥ : ವಿಷ್ಣು ಭೂಮಿಯನ್ನುಕಾಪಾಡಲು ವರಾಹ ಅವತಾರ ತಾಳಿದಂತೆ, ಇವರು ಗೋರಕ್ಷನಾಥರ ಸಂಜೀವಿನಿ ಮಂತ್ರದಿಂದ ಮಣ್ಣಿನ ಪ್ರತಿಮೆಯಲ್ಲಿ ಜನಿಸಿದ ಕಾರಣ, ಇಲ್ಲಿ ವರಾಹವು ಅವರ ಸಂಕೇತ ಎಂಬುದು ನನ್ನ ಅನಿಸಿಕೆಯಾಗಿದೆ. ಇವರು ಅರ್ಧಮತ್ಸ್ಯೇಂದ್ರಾಸನದಲ್ಲಿ ಕುಳಿತಿರುವರು., ಬಲಗೈ ಬಲಮಂಡಿಯ ಮೇಲೆ ಇರುವುದು. ಎಡಗೈ ವರಾಹದ ಮೇಲೆ ಇರುವುದು; ಎರಡು ಮಣಿಕಟ್ಟಿ ನಲ್ಲಿ ಕಡಗ ತೊಡಿಸಿಕೊಂಡಿರುವುದನ್ನು ಕಾಣಬಹುದು.

6. ನಾಗನಾಥ/ ಐರಹೋತ್ರ : ಇವರು ಹಾವಿನ ಮೊಟ್ಟೆಯಿಂದ ಜನಿಸಿರುವುದಾಗಿ ನವನಾಥ ಕಥಾಸಾರದಲ್ಲಿ ತಿಳಿದುಬಂದಿದೆ . ಇಲ್ಲಿನ ಅವರ ವಾಹನ ಸರ್ಪವು ಅವರ ಜನ್ಮವನ್ನು ಸೂಚಿಸುತ್ತದೆ . ಇವರು ರಾಜಲೀಲಾಸನದಲ್ಲಿ ಎಡಬದಿ ತಿರುಗಿರುವ ಸರ್ಪದಮೇಲೆ ಕುಳಿತಿರುವರು. ಇವರು ಜೋಳಿಗೆ ಧರಿಸಿರುವುದನ್ನು ಕಾಣಬಹುದು. ಇವರ ಎಡಗೈ ಎಡ ತೊಡೆಯ ಮೇಲೆ ಹಾಗೂ ಬಲಗೈ ಬಲಮಂಡಿಯಮೇಲೆ/ ಡೋಲದಲ್ಲಿ ವಿಶ್ರಾಂತಿಯಲ್ಲಿದೆ. ತೋಳ್ಬಂದಿ ಹಾಗೂ ಮಣಿಕಟ್ಟಿನಲ್ಲಿ ಕಡಗ/ಕಂಕಣ ಧರಿಸಿರುವರು. ಎದೆಗೆ ಪಟ್ಟಿಹಾಕಿರುವ ಹಾಗೆ ಗುರುತಿಸಬಹುದು. ಈ ಶಿಲ್ಪವು ಕೂಡಾ ವಿಜಯನಗರ ಕಾಲದ ದೇವಸ್ಥಾನಗಳ ಕಂಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

7. ಚರ್ಪಟಿನಾಥ : ಇವರು ಬ್ರಹ್ಮನ ವೀರ್ಯದಿಂದ ಭಾಗೀರಥಿ ನದಿಯ ದಡದಲ್ಲಿ ಜನಿಸಿದರೆಂದು ನವನಾಥ ಕಥಾಸಾರವು ತಿಳಿಸುತ್ತದೆ . ಇಲ್ಲಿ ನಾಥನು ಅರ್ಧಪರಿಯಂಕಾಸನಾದಲ್ಲಿ ಕೂರ್ಮದ ಮೇಲೆ ವಿಶ್ರಾಂತ ಸ್ಥಿತಿಯಲ್ಲಿ ಕುಳಿತಿರುವುದನ್ನು ಹಾಗೂ ಇಲ್ಲಿ ಕೂರ್ಮವು ಮನಸ್ಸಿನ ಸಮಸ್ಥಿತಿಯನ್ನು ತೋರಿಸುವ ಪ್ರತೀಕವಾಗಿದೆ. ಇವರ ತಲೆಯು ತನ್ನ ಬಲ ಅಂಗೈ ಮೇಲೆ ಇರುವುದು, ಬಲಗಾಲು ಕೂರ್ಮದಮೇಲೆ, ಎಡಗೈ ಎಡಗಾಲಿನ ಮೇಲೆ ಹಾಗೂ ಅವರ ಕೇಶವು ಜಡೆಕಟ್ಟಿರುವುದೋ ಎಂಬಂತೆ ಭಾಸವಾಗುತ್ತದೆ. ಅವರು ಜನಿವಾರದ ಜೊತೆಗೆ ಕೊರಳ ಹಾರವನ್ನು ಧರಿಸಿರುವುದನ್ನು ಕಾಣಬಹುದು.

8. ಚೌರಂಗಿನಾಥ / ಭರ್ತರಿನಾಥ : ಜಿಂಕೆಯು ತನ್ನ ಮರಿಗಳೊಂದಿಗೆ ಇವರನ್ನು ಏಳು ವರ್ಷಗಳವರೆಗೆ ಸಾಕಿರುವುದಾಗಿ ನವನಾಥ ಕಥಾಸಾರದಿಂದ ತಿಳಿದುಬಂದಿದೆ. ಇಲ್ಲಿ ಜಿಂಕೆಯೂ ಜ್ಞಾನ ಹಾಗೂ ಚಾತುರ್ಯದ ಸಂಕೇತವಾಗಿದೆ. ಇಲ್ಲಿ ಇವರು ಜಿಂಕೆಯಮೇಲೆ ಕುಳಿತು ಅದರ ಕೊಂಬನ್ನು ಬಲಗೈಯಲ್ಲಿ ಹಿಡಿದು ಹಾಗೂ ಬಾಯಿಯ ಬಳಿ ಎಡಗೈ ಹಿಡಿದಿರುವ ಹಾಗೆ ಕಾಣಬಹುದಾಗಿದೆ.

9. ರೇವನಾಥ / ರೇವಣನಾಥ : ಇವರು ಬ್ರಹ್ಮನ ವೀರ್ಯದಿಂದ ರೇವಾನದಿಯ ದಡದಲ್ಲಿ ಜನಿಸಿದರೆಂದೂ, ಗುರು ದತಾತ್ರೇಯರಿಂದ ಮಂತ್ರ ಶಕ್ತಿಯನ್ನು ಪಡೆದು ಜ್ಞಾನ ಹಾಗೂ ಸಿದ್ಧಿಯನ್ನು ಪಡೆದು ಜನರ ಕಷ್ಟಪರಿಹಾರ ಮಾಡಿದರೆಂದೂ ಪ್ರತೀತಿಯಿದೆ. ಇಲ್ಲಿನ ವಾಹನ ವೃಶ್ಚಿಕವೂ ಜ್ಞಾನ ಮತ್ತು ನಿರ್ಭಯವನ್ನು ಸೂಚಿಸುತ್ತದೆ . ನಾಥರು ವೃಶ್ಚಿಕದ ಮೇಲೆ ಅರ್ಧಮತ್ಸ್ಯೇಂದ್ರಾಸನದಲ್ಲಿ ಕುಳಿತಿರುವನು. ಇವರ ಬಲಗೈಯನ್ನು ಬಾಯಿಯ ಬಳಿ ಹಿಡಿದಿರುವ ಹಾಗೆ, ಎಡಗೈ ಎಡತೊಡೆಯ ಮೇಲೆ, ತೋಳಿನಲ್ಲಿ ಜೋಳಿಗೆ ಹಿಡಿದಿರುವ ಹಾಗೆ ಕಾಣುತ್ತದೆ. ದೊಡ್ಡದಾದ ಕರ್ಣ ಕುಂಡಲಗಳು , ಕೊರಳ ಹಾರದ ಆಭರಣ, ಜನಿವಾರ ಹಾಗೂ ಎದೆಯ ಮೇಲೆ ಪದಕ ಹಾಗೂ ಪಕ್ಕದಲ್ಲಿ ತ್ರಿಶೂಲವು ಇರುವುದನ್ನು ಕಾಣಬಹುದು.
ಶಿಲ್ಪಗಳ ವೈಖರಿ ಮತ್ತು ಯೋಗಭಂಗಿ
ಮತ್ಸ್ಯೇಂದ್ರನಾಥ ಹಾಗೂ ಅವರ ಶಿಷ್ಯರಾದ ಗೋರಕ್ಷನಾಥ , ಉಳಿದ ನಾಥರ ಪ್ರತಿಕೃತಿಗಳನ್ನು ಹಲಸೂರಿನ ದೇವಾಲಯದ ಪ್ರಾಕಾರದ ಎಡಬದಿಯಲ್ಲಿ ವಿಶೇಷವಾಗಿ ಪ್ರತಿಮಾಶಾಸ್ತ್ರದ (iconography) ಪ್ರಕಾರ ಸಾಲಾಗಿ ಕೆತ್ತಿರುವುದನ್ನು ಕಾಣಬಹುದಾಗಿದೆ. ಇಲ್ಲಿ ನಾಥರೂ ಕೆಲವೊಂದು ಆಸನದಲ್ಲಿ ಕುಳಿತಿರುವುದನ್ನು ಕಾಣಬಹುದಾಗಿದೆ. ಅವುಗಳಲ್ಲಿ-
ಅರ್ಧಪರಿಯಂಕಾಸನ - ಈ ಆಸನವು1/3 ದೇಹದ ಭಾರವನ್ನು ಕಡಿಮೆ ಮಾಡುತ್ತದೆ ಹಾಗೂ ಮನಸನ್ನು ಏಕಾಗ್ರತೆಯಿಂದ ಇಡಲು ಸಹಾಯಮಾಡುವುದು.
ರಾಜಲೀಲಾಸನ - ರಾಜವೈಖರಿಯನ್ನು ತೋರಿಸುವ ಆಸನ.
ಅರ್ಧಮತ್ಸ್ಯೇಂದ್ರಾಸನ - ಹಠಯೋಗದಲ್ಲಿ ಕಾಣುವ ಆಸನ ಇದಾಗಿದ್ದು, ಮನಸನ್ನು ಶಾಂತವಾಗಿಸುತ್ತದೆ. ಆತಂಕ ,ಮಾನಸಿಕ ಖಿನ್ನತೆ,ಮನಸ್ಸಿನಮೇಲೆ ಇರುವ ಒತ್ತಡವನ್ನು ನಿವಾರಿಸುತ್ತದೆ.
ಈ ಆಸನಗಳು ನಿಖರವಾದ ಕಾರ್ಯಸಿದ್ಧಿಯನ್ನು ಪಡೆಯಲು ಅನುಕೂಲವಾಗಿವೆ ಎನ್ನಲಾಗುತ್ತದೆ. ಈ ಮಾದರಿಯ ಶಿಲ್ಪಗಳಲ್ಲಿ ಯೋಗದ ಭಂಗಿಯನ್ನು ಕುರಿತು ಅಧ್ಯಯನ ಮಾಡಬಹುದು. [3]
ಲೇಖನಕ್ಕೆ ಆಕರ ಗ್ರಂಥ- ನವನಾಥ ಕಥಾಸಾರ
ಮೂಲ ಲೇಖಕಿ - ವೈಶಾಲಿ ಎ.ವಿ. ನೂಪುರಭ್ರಮರಿ ಸಂಸ್ಥೆಯ ’ನೃತ್ಯಶಿಲ್ಪಯಾತ್ರೆ’ ಅಧ್ಯಯನ ತರಬೇತಿಯ (ಇಂಟರ್ನ್ ಶಿಪ್) ಅಂಗಭಾಗವಾಗಿ ನೂಪುರ ಭ್ರಮರಿ ಅಂತರ್ಜಾಲ ನಿಯತಕಾಲಿಕೆಯಲ್ಲಿ ಪ್ರಕಟಿತವಾದ ಲೇಖನ- ’ಸೋಮೇಶ್ವರ ದೇವಾಲಯದ ನವನಾಥರ ಕೆತ್ತನೆ’[1] WikiIKS ಗೆ ಸಂಪಾದನೆ, ಸಂಶೋಧನ ಮಾರ್ಗದರ್ಶನ ಮತ್ತು ಬರೆವಣಿಗೆ ಮಾರ್ಪಾಟು - ಡಾ.ಮನೋರಮಾ ಬಿ ಎನ್ ಅವರಿಂದ.
- ↑ An in-depth Research Article by Rohini A R Manjunath, on Social life sculptures of Vijayanagara Era portrays the different classification of many such characters; Available in Śilpa Śodha Sangraha research volume as part of Nr̥tyaśilpa Yātre Series; published by Noopura Bhramari IKS Centre.
- ↑ ಈ ದೇಗುಲವು ದ್ರಾವಿಡ ಶೈಲಿಯ ದೇಗುಲವಾಗಿದ್ದು, ವಿಜಯನಗರ ಶೈಲಿಯ ವಾಸ್ತುಶಿಲ್ಪವನ್ನು ಒಳಗೊಂಡಿರುವ ಪುರಾತನ ಶಿವನ ದೇಗುಲವಾಗಿದೆ. ಇದನ್ನು 10ನೇ ಶತಮಾನಕ್ಕೂ ಹಳೆಯ ದೇಗುಲವೆಂದು, ನಂತರ ಹಿರಿಯ ಕೆಂಪೇಗೌಡ ರಿಂದ ಹಾಗೂ ಹಲವು ಬಾರಿ ಹಲವು ಕಾಲದ ರಾಜರಿಂದ ಪುನರ್ ನಿರ್ಮಾಣ ಮಾಡಿರುವುದಾಗಿ, ಹಲವು ಮಾಹಿತಿಗಳು ದೊರಕಿವೆ.
- ↑ An in-depth research article by Sharmila Udupa in the Nr̥tyaśilpa Yātre series book - Śilpa Śodha Sangraha published by Noopura Bhramari IKS Centre.