Idol Worship and Temple Culture

From enIKSwiki
Jump to navigation Jump to search

Authored by : Sri M N Prabhakar

Published by : Ananthkumar Pratishthana

ವಿಗ್ರಹಾರಾಧನೆ ಮತ್ತು ದೇವಾಲಯ ಸಂಸ್ಕೃತಿ

ಎಂ.ಎನ್. ಪ್ರಭಾಕರ್

ದೇವಾಲಯ ವಾಸ್ತುವಿನ ಅಧ್ಯಯನ ಕೈಗೊಳ್ಳುವ ಮೊದಲು ದೇವಾಲಯದ ಗರ್ಭಗೃಹದಲ್ಲಿ ನಿಶ್ಚಲವಾಗಿ ನಿಂತ ದೇವರ ಬಗ್ಗೆಯೂ ಸ್ಥೂಲವಾಗಿ ತಿಳಿದುಕೊಳ್ಳುವುದು ಅವಶ್ಯಕ. ಇವೆರಡರ ಸಮಾನ ಅಧ್ಯಯನ ಪರಿಪೂರ್ಣದೆಡೆಗೆ ಒಯ್ಯುತ್ತದೆ ಎಂದು ಅನಿಸಿಕೆ. ಈ ನಂಬಿಕೆಯಿಂದ ಗರ್ಭಗೃಹದಲ್ಲಿರುವ “ದೇವರ” ಬಗ್ಗೆ ಒಂದು ಸ್ಪಷ್ಟ ಚಿತ್ರಣವಂತೂ ಬೇಕು. ನಮ್ಮ ತಿಳುವಳಿಕೆ ತಪ್ಪು ಅಥವಾ ಸರಿ ಎನ್ನುವುದಕ್ಕಿಂತ ನಮ್ಮ ಮನಸ್ಸಿಗೆ ಒಂದು ರೀತಿ ಸಮಾಧಾನವನ್ನು ನೀಡುವಂತಿರಬೇಕು. ಆಗ ಸ್ಪಷ್ಟತೆ ಎಡೆಗೆ ಮುಂದುವರೆಯಲು ಸಾಧ್ಯ.

ಈವರೆವಿಗೂ ನಡೆದ ಅಧ್ಯಯನಗಳಲ್ಲಿ ವಾಸ್ತುಶಾಸ್ತ್ರ ಮತ್ತು ಪ್ರತಿಮಾ ಶಾಸ್ತ್ರಗಳು ಒಂದೇ ನಾಣ್ಯದ ಎರಡು ಮುಖಗಳು ಎನಿಸಿದ್ದರೂ ಪ್ರತ್ಯೇಕವಾಗಿಯೇ ಅಧ್ಯಯನ ಕೈಗೊಳ್ಳಲಾಗಿದೆ. ಬಹುಶಃ ಇದು ಪಾಶ್ಚಿಮಾತ್ಯರ ಅಧ್ಯಯನದ ರೀತಿ ಎನ್ನಬಹುದು. Architecture ಮತ್ತು Sculpture ಎರಡು ಮುಖಗಳು. ಇವೆರಡನ್ನೂ ಒಳಗೊಂಡದ್ದು ಶಿಲ್ಪಿ ಶಾಸ್ತ್ರವೆಂದೇ ಉಲ್ಲೇಖವಿದೆ.

ಶುಕ್ರನೀತಿ ಗ್ರಂಥದ ಸಾಲುಗಳನ್ನು ನೋಡಬಹುದು:

ಪ್ರಾಸಾದ ಪ್ರತಿಮಾರಾಮ ಗೃಹವಾಪ್ಯಾದಿ ಸಂಸ್ಕೃತಿಃ

ಕಥಿತಾ ಯತ್ರ ತತ್ಶಿಲ್ಪಶಾಸ್ತ್ರಮುಕ್ತಂ ಮಹರ್ಷಿಭಿಃ

ದೇವಾಲಯ, ಅರಮನೆ, ರಾಜಗೃಹ ರಚನೆ, ದೇವತಾ ಮೂರ್ತಿರಚನೆ, ಉಪವನಗಳು, ಸರ್ವೋಪಯೋಗಿ ಸಾರ್ವಜನಿಕ ಕಟ್ಟಡಗಳು, ಬಾವಿ, ಪುಷ್ಕರಿಣಿ ಇತ್ಯಾದಿಗಳ ರಚನೆಗಳನ್ನೂ ಶಿಲ್ಪಶಾಸ್ತ್ರದ ಅಡಿಯಲ್ಲಿ ಗುರುತಿಸಲಾಗಿದೆ.

ಇದರೊಂದಿಗೆ ಇತ್ತೀಚೆಗೆ ಕೆಲವು ಗ್ರಂಥಗಳನ್ನು ನೋಡುತ್ತಿದ್ದಾಗ “ಕರ್ನಾಟಕದಲ್ಲೊಂದು ಪ್ರಾಚೀನ ವೈದಿಕ ದೇವಾಲಯ” ಎಂಬ ಶೀರ್ಷಿಕೆಯು ಗಮನ ಸೆಳೆಯಿತು. ವೈದಿಕ ದೇವಾಲಯ ಎಂಬ ಪದಪುಂಜ ಸಾಧುವೇ ಎಂಬ ಪ್ರಶ್ನೆ ಮೂಡತೊಡಗಿತ್ತು. ದೇವಾಲಯಗಳಲ್ಲಿ ವೈದಿಕ, ಅವೈದಿಕ ಎಂಬ ವರ್ಗೀಕರಣವೇ? ವೈದಿಕ ಎನ್ನುವಲ್ಲಿ ಸ್ಪಷ್ಟತೆ ಬೇಕು.

ಪಾಶ್ಚಿಮಾತ್ಯರು Brahmanical Temples ಎಂದು ಗುರುತಿಸಿದ್ದಾರೆ. ಇದಕ್ಕೆ ಸಂವಾದಿಯಾಗಿ “ವೈದಿಕ ದೇವಾಲಯ” ಪದ ಬಳಕೆಯಾಗಿದೆ. Brahmanical ಎನ್ನುವುದು “ಹಿಂದೂ” ಎಂದು ಸೂಚಿಸುವ ಸಲುವಾಗಿ ಬಳಸಿದ್ದು; ಇದು ಜೈನ, ಬೌದ್ಧ ದೇವಾಲಯಗಳಿಗಿಂತ ಭಿನ್ನ ಎಂದು ಸೂಚಿಸಲು ಬಳಸಿದ್ದಾರೆ ಎನ್ನಬಹುದು. ಪಾಶ್ಚಿಮಾತ್ಯರು ಈ ನಾಡಿನಿಂದ ಹಿಂಸರಿದು ಹಲವು ದಶಕಗಳೇ ಸಂದಿವೆ. ಈಗ ದೇವಾಲಯಗಳನ್ನು ವಾಸ್ತುಗ್ರಂಥಗಳ ಅಡಿಯಲ್ಲಿ ನೋಡಲು ಸಾಧ್ಯವಾಗುತ್ತಿದೆ. ಈ ದಿಸೆಯಲ್ಲಿ ವೈದಿಕ-ಅವೈದಿಕ ಎನ್ನುವುದು ಸಾಧುವಲ್ಲ. ಅಧ್ಯಯನದಲ್ಲಿ ಸ್ಪಷ್ಟತೆ ಬೇಕು. ಹಂತ ಹಂತವಾಗಿ ದೇವಾಲಯಗಳನ್ನು ಆಗಮ ಸಂಪ್ರದಾಯದ ಆಡಿ ಗುರುತಿಸಬೇಕು. ಅಂತಹ ಒಂದು ಪ್ರಯತ್ನ ಇದು.

ಮೊದಲಿಗೆ ಶಂಕರಾಚಾರ್ಯರ ಒಂದು ಸುಂದರ ಸಂಸ್ಕೃತ ಪದ್ಯದಿಂದ ಆರಂಭಿಸಲಾಗಿದೆ.

ರೂಪಂ ರೂಪ ವಿವರ್ಜಿತಸ್ಯ ಭವತೋ ಧ್ಯಾನೇನ ಯತ್ಕಲ್ಪಿತಂ

ಸ್ತುತ್ವಾsನಿರ್ವಚನೀಯತಾsಖಿಲಗುರೋ ದೂರೀಕೃತಾ ಯನ್ಮಯಾ

ವ್ಯಾಪಿತ್ವಂ ಚ ನಿರಾಕೃತೋ ಭಗವತಾ ಯತ್ ತೀರ್ಥಯಾತ್ರಾದಿನಾ

ಕ್ಷಂತವ್ಯಮ್ ಜಗದೀಶಾ ತದ್ ವಿಕಲತಾ ದೋಷತ್ರಯಂ ಮತ್ಕೃತಂ

ರೂಪವಿಲ್ಲದೆ ನಿನಗೆ, ನನ್ನ ಧ್ಯಾನ ಸೌಕರ್ಯಕ್ಕಾಗಿ ನಿನಗೊಂದು ರೂಪವನ್ನು ಕಲ್ಪಿಸಿದ್ದೇನೆ. ನೀನು ಮಾತುಗಳಿಗೆ, ಸ್ತುತಿಗಳಿಗೆ ನಿಲುಕದವನು; ಆದರೂ ನಿನ್ನನ್ನು ಕೀರ್ತನೆಗಳ ಮೂಲಕ ಹಾಡಿ ಹೊಗಳುತ್ತೇನೆ. ನೀನು ಸರ್ವವ್ಯಾಪಿ ಎಂದು ತಿಳಿದಿದ್ದರೂ, ನಿನ್ನನ್ನು ಹುಡುಕಿಕೊಂಡು ತೀರ್ಥಕ್ಷೇತ್ರಗಳಲ್ಲಿ ಸುತ್ತಾಡುತ್ತೇನೆ. ಎಲೈ ಜಗದೀಶನೇ, ನನ್ನಿಂದಾಗುವ ಈ ದೋಷತ್ರಯಗಳನ್ನು ಕ್ಷಮಿಸು.

ಶಂಕರಾಚಾರ್ಯರು ಅದ್ವೈತ ಸಿದ್ಧಾಂತದ ಪ್ರತಿಪಾದಕರು ಶ್ರೀಸಾಮಾನ್ಯನಿಗಾಗಿ ಹಲವು ಸ್ತೋತ್ರಾದಿಗಳನ್ನ್ನೂ ರಚಿಸಿದ್ದಾರೆ ಎಂದು ಗಮನಿಸಬಹುದು.

“ಪ್ರತಿಮಾ ಅಲ್ಪ ಬುದ್ಧಿನಾಂ” - ಎಂಬ ವಾಕ್ಯವಿದೆ. ದೇವರು, ಮೂರ್ತಿಶಿಲ್ಪ, ದೇವಾಲಯಾರ್ಚನೆ ಇವೆಲ್ಲವೂ ಶ್ರೀಸಾಮಾನ್ಯನಿಗಾಗಿ; ಅದರಂತೆ ಸ್ತೋತ್ರಾದಿಗಳನ್ನೂ ಶ್ರೀಸಾಮಾನ್ಯನ ಆಚರಣೆಗಾಗಿ ರಚಿಸಿದ್ದಾರೆ. ಈ ಸಂದರ್ಭದಲ್ಲಿ ನಾಗಮಂಗಲ ತಾಲ್ಲೂಕು ಲಾಲನಕೆರೆಯ ಕೆಳಗಿನ ಶಾಸನಪದ್ಯವನ್ನು ಗಮನಿಸಬಹುದು.

ಭೇದಂ ಮೂರ್ತಿಯೊಳಲ್ಲದೆ

ಭೇದಂ ಪರಮಾತ್ಮತತ್ವದೊಳು ಸಲ್ಲದೆನಲು

ಮಾದೇವರಾದ ಭೇದದ

ಮಾದೇವಂ ದೇವನೀಗೆ ಸುಖಸಂಪದಮಂ

ಕಾಮಿಕಾಗಮದ ವಾಕ್ಯ ಇಂತಿದೆ:

ಬ್ರಹ್ಮವಿಷ್ಣುಹರಾ ಏವ ಲಿಂಗೇ ತತ್ವಂ ತ್ರಯಾಧಿಪಾಃ

ಅಪರಾಜಿತಪೃಚ್ಪಾ ಗ್ರಂಥದ ಉಲ್ಲೇಖ ಇಂತಿದೆ:

ಸರ್ವೇ ಲಿಂಗಾಶ್ರಿತಾದೇವಾ ಲಿಂಗಂ ದೇವಾಶ್ರಿತಂ ಶುಭಂ

ಅಥರ್ವವೇದದ 10ನೇ ಕಾಂಡದ ಸಾಲುಗಳನ್ನು ಗುರುತಿಸಬಹುದು.

ಸ್ಕಂಭಂ ತದ್ ಬ್ರೂಹಿ ಕತಮಸ್ವಿ ದೇವಸಃ

ಯಸ್ಮಿನ್ ಭೂಮಿಃ ಅಂತರಿಕ್ಷಮ್ ದ್ಯೌಃ ಯಸ್ಮಿನ್ ಅಧ್ಯಾಹಿತಾ

ಯತ್ರಾಗ್ನಿ ಚಂದ್ರಮ್ ಸೂರ್ಯೋವಾ ತಿಷ್ಠತಿ ಅರ್ಪಿತಾಃ

ಸ್ತಂಭಂ ತದ್ ಬ್ರೂಹಿ ಕತಮಸ್ವಿ ದೇವಸಃ (10.7.12)


ಯಸ್ಯ ತ್ರಯಂತ್ರಿಂಶತ್ ದೇವಾಃ ಅಂಗೇ ಸರ್ವೇ ಸಮಾಹಿತಾಃ

ಸ್ತಂಭಂ ತದ್ ಬ್ರೂಹಿ ಕತಮಸ್ವಿ ದೇವಸಃ (10.7.13)

ಯಸ್ಮಿನ್ ಸ್ತಬ್ದ್ವಾ ಪ್ರಜಾಪತಿಃ ಲೋಕಾನ್ ಸರ್ವಾನ್ ಆಧಾರಯತ್

ಸ್ತಂಭಂ ತದ್ ಬ್ರೂಹಿ ಕತಮಸ್ವಿ ದೇವಸಃ (10-7-14)

ಕನ್ನಡ ಶಾಸನಗಳಲ್ಲಿ ಕಾಣುವ ಮಂಗಳಶ್ಲೋಕವನ್ನೂ ಹೆಸರಿಸಬಹುದು.

ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ

ತ್ರೈಲೊಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ

ಗರ್ಭಗೃಹದಲ್ಲಿರುವ ದೇವರು ಸಾಂಕೇತಿಕ. ಲಿಂಗವು ಎಲ್ಲಾ ದೇವತೆಗಳ ಪ್ರತಿನಿಧಿ, ಲಿಂಗದಲ್ಲಿ ಎಲ್ಲಾ ದೇವತೆಗಳೂ ಅದರಲ್ಲಿಯೇ ಅಡಗಿದ್ದಾರೆ ಎಂದು ಅಥರ್ವವೇದವು ಗುರುತಿಸಿದೆ.

“ವಿಗ್ರಹ” ಪದವನ್ನೂ ಗುರುತಿಸೋಣ: “ವಿಶೇಷೇಣ ಗೃಹ್ಯತೇ ಇತಿ ವಿಗ್ರಹಃ” . ಗೃಹ್ ಧಾತು ಮೂಲದ್ದು. ಬಿಗಿಯಾಗಿ ಹಿಡಿದುಕೊಂಡಿರುವುದು ಎಂಬ ಅರ್ಥ.

ಪ್ರಮಾಣೇ ಸ್ಥಾಪಿತಾ ದೇವಾ ಪೂಜಾರ್ಹಶ್ಚ ಭವಂತಿ ಹಿ

“ಲಿಂಗ” ಪದವನ್ನು ಮೊದಲು ಗಮನಿಸಬೇಕು. “ಲಿಂಗಂ ಚಿತ್ರೀಕರಣೆ” ಎಂಬ ವ್ಯುತ್ಪತ್ತಿ ಇದೆ. ಲಿಂಗ ಎಂದಲ್ಲಿ ಗುರುತು, ಸಂಕೇತ, ಪ್ರತಿನಿಧಿತ್ವ ಎಂದು ಅರ್ಥೈಸಲಾಗುತ್ತದೆ.

ಸನತ್ಕುಮಾರ ಸಂಹಿತೆಯ ಸಾಲುಗಳು ಇಂತಿವೆ:

ಲಿಂಗಂ ತು ವಿವಿಧಂ ಪ್ರೋಕ್ತಂ ಬ್ರಾಹ್ಮ ಶಂಕರಮೇವ ಚ

ವೈಷ್ಣವಂ ಚ ನಿರ್ದೈವಂ ಚ ಚತುರ್ಥಂ ಪರಿಕೀರ್ತಿತಂ

ಲಿಂಗದಲ್ಲಿ ನಾಲ್ಕು ವಿಧ. ಬ್ರಹ್ಮ, ಶಂಕರ, ವಿಷ್ಣು ಹಾಗೂ ನಿರ್ದೈವ. ನಿರ್ದೈವ ಎಂದಲ್ಲಿ ಸಾಂಕೇತಿಕವೇ. ಯಾವ ದೇವರನ್ನಾದರೂ ಆರೋಪಿಸಬಹುದು.

“ಲಿಂಗೇ ಶಿವಂ ಸಮಾವಾಹ್ಯ ಮೂಲೇನ ಸದ್ಯ ಮಂತ್ರತಃ”

ಇದು ರೌರವಾಗಮದ ಉಕ್ತಿ. ಲಿಂಗದಲ್ಲಿ ಸದ್ಯೋಜಾತಾದಿ ಮಂತ್ರಗಳ ಮೂಲಕ ಶಿವನನ್ನು ಆವಾಹಿಸಬಹುದು. ಅದೇ ರೀತಿ ಲಿಂಗದಲ್ಲಿ ಯಾವ ದೇವರನ್ನಾದರೂ ಆವಾಹಿಸಬಹುದು. ತ್ರೈಪುರುಷರ ದೇವಾಲಯಗಳಲ್ಲಿ ಮೂರು ಲಿಂಗಗಳಿವೆ. ಅವು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರನ್ನು ಪ್ರತಿನಿಧಿಸುತ್ತವೆ.

ಅರ್ಚನೆಗೆ ಸಿದ್ಧವಾದ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ರಚಿಸಬೇಕು. ಇವುಗಳಲ್ಲಿ ನಾಲ್ಕು ರೀತಿಯಲ್ಲಿ ಹೇಳಲಾಗಿದೆ. ಲಿಂಗ-ಬೇರ-ಬಿಂಬ-ಪ್ರತಿಮಾ ಎಂದು ನಾಲ್ಕು ಬಗೆ.

ಲಿಂಗಂ ಬೇರಂ ಚ ಬಿಂಬ ಚ ಪ್ರತಿಮಾ ಚತುರ್ವಿಧಂ

ಬೇರಂ ಸ್ಥಾಪಿತಂ ಮೂರ್ತಿ ಸ್ಯಾದರೂಪಂ ಲಿಂಗಮುಚ್ಯತೇ

ಬಿಂಬಂ ಚ ಲೋಹರೂಪಂ ಸ್ಯಾತ್ ಪ್ರತಿಮಾ ಕೃತಕಂ ಭವೇತ್

- ಮಾರ್ಕಾಂಡೇಯ ಸಂಹಿತೆ

ರೂಪವಿಲ್ಲದ್ದು “ಲಿಂಗ”, ಪ್ರತಿಷ್ಠಾಪನೆಗೊಂಡದ್ದು “ಬೇರ”, ಲೋಹದಲ್ಲಿ ಎರಕ ಹೊಯ್ದದ್ದು “ಬಿಂಬ”; ಪ್ರತಿಮಾ ಎಂದಲ್ಲಿ ಪ್ರತಿಕೃತಿ.

ಲಿಂಗವೆಂದರೆ ಸಾಮಾನ್ಯ ತಿಳುವಳಿಕೆ ಪಾಣಿಪೀಠದ ಮೇಲಿರುವ ವೃತ್ತಾಕಾರದ ರುದ್ರಭಾಗ. ಆದಿ ಅಂತ್ಯಗಳನ್ನು ಕಾಣದ ಸ್ಕಂಭವು ಲಿಂಗವೇ. ಪಾಣಿಪೀಠದ ಮೇಲೆ ಕೇವಲ ವೃತ್ತಾಕಾರ ಗೋಚರವಾದರೂ ಕೆಳಭಾಗದಲ್ಲಿ ಚತುರಶ್ರ, ಅಷ್ಟಾಶ್ರ ಭಾಗಗಳು ಹುದುಗಿರುತ್ತದೆ. ಕೆಳಗಿನ ಚತುರಶ್ರ ಭಾಗ ಬ್ರಹ್ಮ, ಮಧ್ಯದ ಅಷ್ಟಾಶ್ರ ಭಾಗ ವಿಷ್ಣುವಿನ ಪ್ರತಿನಿಧಿ. ವೃತ್ತಾಕಾರ ಶಿವ ಸ್ವರೂಪ. ಆದ್ದರಿಂದ ಲಿಂಗವು ಬ್ರಹ್ಮ, ವಿಷ್ಣು ಹಾಗೂ ಶಿವ, ತ್ರಿಮೂರ್ತಿಗಳ ಪ್ರತಿನಿಧಿ.

ಈಶಾನ ಶಿವ ಗುರು ದೇವ ಪದ್ಧತಿ, ಮಯಮತ ಗ್ರಂಥಗಳು ಲಿಂಗ ಲಕ್ಷಣಗಳನ್ನು ವಿವರಿಸುವಾಗ ಸಕಲ, ನಿಷ್ಕಲ, ಮಿಶ್ರ ಎಂದೂ ವಿವರಿಸಿವೆ.

ನಿಷ್ಕಲಂ ಸಕಲಂ ಮಿಶ್ರಂ ಲಿಂಗಂ ಚೇತಿ ತ್ರಿಧಾಸ್ಮೃತಂ

ನಿಷ್ಕಲಂ ಲಿಂಗಮಿತ್ಯುಕ್ತಂ ಸಕಲಂ ಬೇರಮುಚ್ಯತೇ

ಮುಖಲಿಂಗಂ ತಯೋರ್ಮಿಶ್ರಂ ಲಿಂಗೊಚ್ಚಾಕೃತಿ ಸನ್ನಿಭಂ

ರೂಪವಿಲ್ಲದ್ದು ಸಾಂಕೇತಿಕ, ಅದೇ ನಿಷ್ಕಲ. ಪೂರ್ಣ ಪ್ರಮಾಣದ ವಿಗ್ರಹ ಸಕಲ; ಮುಖಲಿಂಗವನ್ನು ಮಿಶ್ರ ಎನ್ನಲಾಗಿದೆ.

ಪೂರ್ಣ ಪ್ರಮಾಣದ ವಿಗ್ರಹವು ಗರ್ಭಗೃಹದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತದೆ. ಆಗ ಅದು “ಬೇರ” ಎಂದೆನಿಸುತ್ತದೆ. ಗರ್ಭಗೃಹದಲ್ಲಿರುವುದು “ಧ್ರುವಬೇರ” ಇದು ಮೂಲವಿಗ್ರಹ. ಇದಲ್ಲದೆ ಕೌತುಕಬೇರ, ಬಲಿಬೇರ, ಉತ್ಸವ ಬೇರ ಮೊದಲಾದ ವಿಗ್ರಹ ರಚನೆಗಳೂ ಇವೆ. ಮೂಲಬೇರಕ್ಕೆ ಸಲ್ಲುವ ಹಲವು ಕೈಂಕರ್ಯಗಳನ್ನು ಇತರ ವಿಗ್ರಹಗಳ ಮೂಲಕ ನೆರವೇರಿಸಲಾಗುತ್ತದೆ.

“ಬಿಂಬ” ಎಂದಲ್ಲಿ ಲೋಹ ರಚನೆ.

ಯಥೈವ ಬಿಂಬಂ ಮೃದುಯೋಪಲಿಪ್ತಂ

ತೇಜೋಮಯಂ ಭ್ರಾಜತೇ ತತ್ ಸುಧಾಂತಂ

ಇದು ಶ್ವೇತಾಶ್ವತರೋಪನಿಷತ್ತಿನ ಉಲ್ಲೇಖ. ಬಿಂಬ ರಚನೆಯ ಸೂಕ್ಷ ವಿವರವು ಇಲ್ಲಿದೆ. ಲೋಹವನ್ನು ಕರಗಿಸಿ ಮಣ್ಣಿನ ಅಚ್ಚಿನಲ್ಲಿ ಎರಕ ಹೊಯ್ದಾಗ ವಿಗ್ರಹ ರೂಪಗೊಳ್ಳುತ್ತದೆ. ಮಣ್ಣಿನ ಅಚ್ಚಿನಿಂದ ಬಿಡಿಸಿದಾಗ ಹೊಳೆಯುವ ಬಿಂಬವನ್ನು ಇಲ್ಲಿ ಬಣ್ಣಿಸಲಾಗಿದೆ. ಕಂಚು, ಹಿತ್ತಾಳೆ, ತಾಮ್ರ, ಸೀಸ, ಚಿನ್ನ ಬೆಳ್ಳಿಯ ವಿಗ್ರಹಗಳನ್ನು ಬಿಂಬದ ಅಡಿಯಲ್ಲಿ ಗುರುತಿಸಲಾಗಿದೆ.

“ಪ್ರತಿಮಾ” ಎಂದಲ್ಲಿ ಪ್ರತಿಕೃತಿ; ಮೂಲದಂತೆ ಮತ್ತ್ತೊಂದರ ರಚನೆ ಮಣ್ಣಿನಿಂದಲೂ ಆಗಬಹುದು. ಬಣ್ಣಗಳಿಂದ ರಚಿಸಿದ ಚಿತ್ರಗಳು ಪ್ರತಿಕೃತಿಯೇ.

ವೇದಗಳ ಕಾಲದಲ್ಲಿ ಮೂರ್ತಿಪೂಜೆ ಇರಲಿಲ್ಲವೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ. ಗೃಹಾರ್ಚನೆಗೆ ಸೀಮಿತವಾಗಿತ್ತು ಎಂದು ವಿದ್ವಾಂಸರ ಅಭಿಪ್ರಾಯ. ವೇದ ಹಾಗೂ ಉಪನಿಷತ್ತುಗಳಿಗೆ ಪಾರಮಾರ್ಥಿಕ ಅರ್ಥವಲ್ಲದೆ ಸರಳ ರೀತಿಯಲ್ಲಿಯೂ ಅರ್ಥೈಸಲು ಸಾಧ್ಯವಿದೆ.

“ದ್ವೇವಾವ ಬ್ರಾಹ್ಮಣೋ ರೂಪೇ ಮೂರ್ತಂ ಚೈವಾಮೂರ್ತಂ ಚ”

ಇದು ಬೃಹದಾರಣ್ಯಕದ ಸಾಲು ಬ್ರಹ್ಮನಿಗೆ ಎರಡು ರೂಪಗಳು ಮೂರ್ತ ಹಾಗೂ ಅಮೂರ್ತ. ಅಮೂರ್ತದ ಚಿಂತನೆ, ದಾರಿ ಸರಳವೆನಿಸಿಲ್ಲ. ಅಮೂರ್ತವನ್ನು ಪರಬ್ರಹ್ಮ ಎನ್ನೋಣ; ಮೂರ್ತವನ್ನು ಪರಮಾತ್ಮ ಎನ್ನೋಣ.

ಪರಬ್ರಹ್ಮನನ್ನು ಕುರಿತ ಚಿಂತನೆ, ನಿರೂಪಣೆ ವೈದಿಕ ಸಾಹಿತ್ಯದಲ್ಲಿ. ಪರಮಾತ್ಮನನ್ನು ಕುರಿತ ಚಿಂತನೆ, ಸ್ವರೂಪ ಆಗಮ ಸಾಹಿತ್ಯದಲ್ಲಿ. ಅವ್ಯಕ್ತಕ್ಕೆ ಆಕಾರ ನೀಡಿದಾಗ ಅರಳಿದ್ದು ಮೂರ್ತರೂಪ. ಈ ರೂಪ ಶ್ರೀಸಾಮಾನ್ಯನ ಅವಶ್ಯಕತೆಗೆ ಅನುಗುಣವಾದದ್ದು. “ನಚರೂಪಂ ವಿನಾದೇವೋ ಧ್ಯಾತುಂ ಕೇನಾಪಿ ನ ಶಕ್ಯತೇ” ಇದು ವಿಷ್ಣು ಸಂಹಿತೆಯ ಉಕ್ತಿ. ಎಲ್ಲರೂ ತತ್ವಜ್ಞಾನಿಗಳಾಗಲು ಸಾಧ್ಯವಿಲ್ಲ. ಶ್ರೀಸಾಮಾನ್ಯನ ಅವಶ್ಯಕತೆಗೆ ಅನುಗುಣವಾಗಿ, ಧ್ಯಾನ ಅಥವಾ ಆರಾಧನೆಗೆ ಒಂದು ಅವಲಂಬನೆ ಬೇಕು.

ರೂಪಂ ರೂಪಂ ಪ್ರತಿರೂಪೋ ಬಭೂವ

ತದಸ್ಯ ರೂಪಂ ಪ್ರತಿಚಕ್ಷಣಾಯ

ಇಂದ್ರೋ ಮಾಯಾಭಿಃ ಪುರುರೂಪ ಈಯತೇ

ಋಗ್ವೇದದ ಸಾಲುಗಳು ಬೃಹದಾರಣ್ಯಕೋಪನಿಷತ್ತಿನಲ್ಲಿ ಪುನರುಕ್ತಿಯಾಗಿದೆ. ಇಂದ್ರ ದೇವತೆಗಳ ಪ್ರತಿನಿಧಿ. ಪ್ರಕಟಗೊಳ್ಳುವ ಸಲುವಾಗಿ ಹಲವು ರೂಪಗಳನ್ನು ಧರಿಸುತ್ತಾನೆ. ಪುರುಷರೂಪದಲ್ಲಿಯೂ ಪ್ರಕಟಗೊಳ್ಳುತ್ತಾನೆ. ಪುರುಷ ರೂಪದಲ್ಲಿ ಪ್ರಕಟಗೊಳ್ಳುವುದರಿಂದ ಪುರುಷವಾಚಿ.

“ಸವಾ ಅಯಂ ಪುರುಷಃ ಸರ್ವಾಸು ಪೂರ್ಷು ಪುರಿಶಯಃ”

ಎಲ್ಲರ ಪುರಗಳಲ್ಲಿ, ದೇಹಗಳಲ್ಲಿ ವಾಸಿಸುವುದರಿಂದ ಪುರುಷ ಎಂದೆನಿಸಿದನು.

“ಪೂರ್ವ ಏವ ಆಸನ್ ಇಹ ಇತಿ”

ಹಿಂದೆಯೂ ಇದ್ದವನು ಎಲ್ಲೆಡೆ ಇರುವವನು, ವ್ಯಾಪಿಸಿರುವವನು. ಅವನು ವಿಷ್ಣುವೂ ಹೌದು. “ವಿಶ್” ಧಾತುವಿನಿಂದ ವಿಶತಿ; “ವಿಷ್ಣಾತೇರ್ವಿಶತೇ ವಾ” - ವಿಷ್ಣು ಪದದ ಅರ್ಥ ಎಲ್ಲೆಡೆ ಹರಡಿರುವವನು ಎಂದೇ ಗುರುತಿಸಲಾಗಿದೆ.

ವೈಖಾನಸರಲ್ಲಿ ವಿಷ್ಣು ಪ್ರಮುಖ ದೈವ. ಭಾಗವತರಲ್ಲಿ ವಾಸುದೇವ ಕೃಷ್ಣ. ಪಾಂಚರಾತ್ರರಲ್ಲಿ ವಾಸುದೇವನಾಗಿ ಕಾಣಿಸಿಕೊಳ್ಳುತ್ತಾನೆ.

ಪಾಂಚರಾತ್ರ ಆಗಮಗಳಲ್ಲಿ ತನ್ನ ಪರಿಧಿಯನ್ನು ವಿಸ್ತರಿಸಿದ್ದಾನೆ. ವಿಷ್ಣುವಿಗೆ ಷಡ್ಗುಣಗಳನ್ನು ಆರೋಪಿಸಿದ್ದು ಈ ಮೂಲಕ ಚತುರ್ವ್ಯೂಹ ಸೃಷ್ಟಿ. ಶಾಸ್ತ್ರೀಯ ಚೌಕಟ್ಟು ಲಭ್ಯವಾಗುವುದು ಈ ಹಿನ್ನೆಲೆಯಲ್ಲಿ ಇದು ಸಾಂಖ್ಯ ಹಾಗೂ ಯೋಗ ದರ್ಶನಗಳ ಮೂಲಕ

ಕಿರೀಟಿನಂ ಗದಿನಂ ಚಕ್ರ ಹಸ್ತಂ ಇಚ್ಛಾಮಿತ್ವಾ ದ್ರಷ್ಟುಮಹಂ ತಥೈವ

ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ

ವೈದಿಕ ಸಾಹಿತ್ಯದಲ್ಲಿ ಸಹಸ್ರಶೀರ್ಷಾ ಪುರುಷನೆನಿಸಿದ ವಿಷ್ಣು, ಆಗಮಗಳಲ್ಲಿ ಚತುರ್ಭುಜ ಮೂರ್ತಿಯಾಗಿದ್ದಾನೆ. ದ್ವಾಪರಯುಗದ ಅಂತ್ಯದಲ್ಲಿ ಮಹಾಭಾರತದಲ್ಲಿ ಚತುರ್ಭುಜನಾಗಿ, ವಿಶ್ವರೂಪಿಯಾಗಿ ಕಾಣಿಸಿಕೊಳ್ಳುತ್ತಾನೆ. ಶಂಖ ಚಕ್ರ ಗದಾಧಾರಿಯಾಗಿ ಆಯುಧ ಸಂಹಿತೆಯೊಡನೆ ಕಾಣಿಸಿಕೊಳ್ಳುತ್ತಾನೆ. ಪ್ರತಿಮಾಶಾಸ್ತ್ರ ರೂಪುಗೊಂಡದ್ದು ಈ ರೀತಿ ಎಂದು ಗಮನಿಸಬೇಕು.

ಶಿವನು ಲಿಂಗರೂಪದಲ್ಲಿ, ಸ್ಕಂಭರೂಪದಲ್ಲಿ ಅವತರಿಸಿದ್ದನ್ನು ಗಮನಿಸಲಾಗಿದೆ. ನಂತರ ಶಿವನ ಲೀಲಾಮೂರ್ತಿಗಳು. ಬ್ರಹ್ಮನನ್ನು ಪರಬ್ರಹ್ಮ ಸ್ವರೂಪದಲ್ಲಿ ಗುರುತಿಸಿದ್ದೇ ಹೆಚ್ಚು. ದೇವಾಲಯಗಳಲ್ಲಿ ಆರಾಧನೆಯ ಆರಂಭ ಮಹಾಭಾರತದ ಕಾಲದಿಂದ. ವೈಖಾನಸರೇ ಮೊದಲಿಗೆ ಅರ್ಚನೆಗೆ ತೊಡಗಿದವರು. ಮೊದಲ ಅರ್ಚಕರು. (First priestly class) ದೇವಾಲಯಗಳಲ್ಲಿ ಅರ್ಚನೆಯನ್ನು ವೃತ್ತಿಯಾಗಿ ಸ್ವೀಕರಿಸಿದವರು.

ಆರಾಧನೆಯಲ್ಲಿ ಎರಡು ವಿಧ: ಸ್ವಾರ್ಥ ಮತ್ತು ಪರಾರ್ಥ. ಮನೆಯಲ್ಲಿ ಮಾಡುವುದು ವೈಯಕ್ತಿಕ ಪೂಜೆ-ಸ್ವಾರ್ಥ. ಪರಾರ್ಥವೇ ಆಲಯಾರ್ಚನೆ. ವೈಖಾನಸರು ಯಜ್ಞ ಯಾಗಾದಿಗಳ ಆಚರಣೆಯೊಂದಿಗೆ ಆಲಯಾರ್ಚನೆಗೂ ಒಂದು ವ್ಯವಸ್ಥೆಯನ್ನು ಬೆಳಕಿಗೆ ತಂದರು. ವೈದಿಕ ಸಂಪ್ರದಾಯ ಹಾಗೂ ಆಗಮ ಸಂಪ್ರದಾಯ ಎರಡನ್ನು ಅನುಸರಿಸಿದರು. ಆಗಮ ಸಂಪ್ರದಾಯವನ್ನು ಮುಂದೆ ವಿಸ್ತಾರವಾಗಿ ಗಮನಿಸಬಹುದು.

ಇದರೊಂದಿಗೆ “ದೇವರು” ಎಂಬ ಪದವನ್ನು ಅರ್ಥ ಮಾಡಿಕೊಳ್ಳಬೇಕು. “ದೇವ” ಪದದ ಮೂಲ ಇಂತಿದೆ: ದಿವು ಕ್ರೀಡಾದೌ - ಮಾಯಾಪಾಶೇನ ಜೀವಾನ್ ಬಧ್ವಾ ಸ ಕ್ರೀಡತಿ. ಅವನು ಮಾಯಾಪಾಶದಿಂದ ಜೀವಗಳನ್ನು ಬಂಧಿಸಿ ಕ್ರೀಡಿಸುತ್ತಾನೆ! “ದಿವು” ಧಾತುವಿನ ಅರ್ಥ ಕ್ರೀಡತಿ ವಿಜಿಗೀಷಾ, ದ್ಯುತಿ, ಸ್ತುತಿ, ಮೋದತಿ ಗತಿಷು(ಚಲನಶೀಲತೆ).

ಯಸ್ಯಯಸ್ಯತು ಮಂತ್ರಸ್ಯ ಉದ್ಧಿಷ್ಟಾ ದೇವತಾ ತು ಯಾ ತದಾಕಾರಂ ಭವೇತ್, ತಸ್ಯ ದೇವತ್ವಂ ದೇವ ಮುಚ್ಯತೇ ಧ್ಯಾನಶ್ಲೋಕದ ಆಧಾರದಿಂದ ದೇವತೆಗಳಿಗೆ ಆಕಾರ ರೂಪುಗೊಳ್ಳುತ್ತದೆ. ದೇವಸ್ಥಾನವೆಂದರೆ ದೈವದ ಸ್ಥಾನಗಳು. ದೇವಾಲಯ ಎಂದಲ್ಲಿ ದೇವಸ್ಯ ಆಲಯಃ, ದೇವಾನಾಂ ಆಲಯಃ.

ಕರ್ನಾಟಕದ ಹಿರಿಯ ವಿದ್ವಾಂಸರ ಸಾಲುಗಳೊಂದಿಗೆ ಈ ಪ್ರಬಂಧವನ್ನು ಪೂರ್ಣಗೊಳಿಸೋಣ:

      “Everything good and great in Karnataka has gone into construction of Temple”.